ದೇವರ ಆರಾಧನೆ, ಸಮೃದ್ಧಿಯ ಪ್ರಾರ್ಥನೆ ಮತ್ತು ಸಮೂಹ ಒಗ್ಗಟ್ಟಿನ ಸಂಕೇತವಾದ ಕರಾವಳಿ ಸಂಸ್ಕೃತಿಯ ವೈಭವದ ವಾತಾವರಣ ಕಾರವಾರದ ಚೆಂಡಿಯಾದಲ್ಲಿ ಕಾಣಿಸುತ್ತಿದೆ. 10 ವರ್ಷಗಳ ತರುವಾಯ ಇಲ್ಲಿನ ಗುನಗಿ ಸಮಾಜದವರು ಸುಗ್ಗಿಮೇಳ ಕಟ್ಟಿದ್ದು, ಹೋಳಿ ಹಬ್ಬದ ಸೊಬಗು ಹೆಚ್ಚಿಸಲು ಸಜ್ಜಾಗಿದ್ದಾರೆ.
ಕರಾವಳಿ ಭಾಗದಲ್ಲಿ ಹೋಳಿ ಹಬ್ಬವು ಕೇವಲ ಬಣ್ಣಗಳ ಹಬ್ಬವಲ್ಲ; ಅದು ಭಕ್ತಿ, ಸಂಪ್ರದಾಯ ಮತ್ತು ಸಮೂಹಭಾವದ ಸಾಂಸ್ಕೃತಿಕ ಉತ್ಸವ. ಇದೇ ಪರಂಪರೆಯ ಭಾಗವಾಗಿ ತಾಲೂಕಿನ ಚೆಂಡಿಯಾ ಗ್ರಾಮದ ಹೇಮಜ್ಜನ ಮಂಡದ ಗುನಗಿ ಸಮಾಜದವರು 10 ವರ್ಷಗಳ ಬಳಿಕ ಸುಗ್ಗಿಮೇಳವನ್ನು ವೈಭವದಿಂದ ಆರಂಭಿಸಿದ್ದು, ಗ್ರಾಮದಲ್ಲಿ ಉತ್ಸಾಹದ ವಾತಾವರಣ ಕಾಣಿಸುತ್ತಿದೆ. ಹೋಳಿ ಹುಣ್ಣಿಮೆಗೆ ಒಂಬತ್ತು ದಿನಗಳ ಮುನ್ನ ಗ್ರಾಮ ದೇವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸುವ ಸಂಪ್ರದಾಯದAತೆ ಕಳೆದ ಫೆ 21ರಂದು ಸಂಜೆ 5 ಗಂಟೆಗೆ ಸುಗ್ಗಿಮೇಳಕ್ಕೆ ಚಾಲನೆ ನೀಡಲಾಗಿದೆ. ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಮೇಳ ಉದ್ಘಾಟಿಸಿದ್ದಾರೆ. ಸಂಕಲ್ಪ, ಪೂಜೆ ಮತ್ತು ಸಮೂಹ ಪ್ರಾರ್ಥನೆಯೊಂದಿಗೆ ತುರಾಯಿ, ಚಂಡೆ ಹಾಗೂ ತಾಳಗಳ ಘೋಷದಲ್ಲಿ ಮೇಳ ಪ್ರಾರಂಭಗೊAಡಿದೆ.
ಮAಡದ ಬುಧವಂತರಾದ ನಿಶಾಂಭರ, ಮಾದು ಗುನಗಿ (ಹೊನ್ನಗದ್ದೆ ಭಾಗ), ಕೋಲಕಾರರ ಮುರಾರಿ ಎಲ್ ಗುನಗಿ (ಇಡೂರು) ಸೇರಿದಂತೆ ಹಲವು ಗಣ್ಯರು ಈ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು, ಸಮಾಜದ ಹಿರಿಯರು ಮತ್ತು ಯುವಪೀಳಿಗೆ ಒಂದಾಗಿ ಭಾಗವಹಿಸಿದ್ದರು. ಸಂಪ್ರದಾಯದ ನಿರಂತರತೆಯನ್ನು ಕಾಪಾಡುವ ಸಂಕಲ್ಪ ಎಲ್ಲರಲ್ಲಿಯೂ ಸ್ಪಷ್ಟವಾಗಿ ಕಾಣಿಸಿಕೊಂಡಿತು. ಇಲ್ಲಿ ಸುಗ್ಗಿ ಪ್ರಾರಂಭವಾದ ಬಳಿಕ ಕಾಮದಹನದವರೆಗೆ ಭಾಗವಹಿಸುವವರು ಮನೆಗೆ ತೆರಳದೇ ನಿಯಮ-ನಿಷ್ಠೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಚೆಂಡಿಯಾದ ಐದು ಹಳ್ಳಿಮಂಡ ಸೇರಿದಂತೆ ತೊಡೂರು, ಕೊಡಾರ, ಅರಗಾ, ಬಿಣಗಾ, ಕಾರವಾರ ಗುರುಮಠ, ಪಂಚಮಹಲ, ಕಡವಾಡ ಹಾಗೂ ಕಿನ್ನರ ಮಂಡಗಳಿಗೆ ಭೇಟಿ ನೀಡಿ, ಸಮಾಜದ ಪ್ರತಿಯೊಬ್ಬರ ಮನೆಗೆ ತೆರಳಿ ಸುಗ್ಗಿ ಕುಣಿದು ಸಂಭ್ರಮಿಸುತ್ತಾರೆ. ಪ್ರತಿ ಮನೆಯ ಕನಿಷ್ಠ ಒಬ್ಬ ಸದಸ್ಯ ಮೇಳದಲ್ಲಿ ಪಾಲ್ಗೊಳ್ಳುವುದು ಈ ಆಚರಣೆಯ ವಿಶಿಷ್ಟತೆ.
ಈ ಬಾರಿಯ ಮೇಳದಲ್ಲಿ 7 ತುರಾಯಿಗಳೊಂದಿಗೆ ಸುಮಾರು 100ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದಾರೆ. ಹತ್ತು ವರ್ಷಕ್ಕೊಮ್ಮೆ ನಡೆಯುವ ಈ ಸುಗ್ಗಿಮೇಳ ಗ್ರಾಮದಲ್ಲಿ ಆಧ್ಯಾತ್ಮಿಕ ಚೈತನ್ಯ ಮೂಡಿಸುವುದರ ಜೊತೆಗೆ ಸಾಮಾಜಿಕ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ದೂರದ ಊರುಗಳಲ್ಲಿ ವಾಸಿಸುತ್ತಿರುವ ಗ್ರಾಮಸ್ಥರೂ ಈ ಸಂದರ್ಭಕ್ಕೆ ತಮ್ಮ ಊರಿಗೆ ಮರಳಿ ಬಂದು ಭಾಗವಹಿಸುವುದು ವಿಶೇಷವಾಗಿದ್ದು, ಮನೆಮನೆಗಳಲ್ಲಿ ಆತಿಥ್ಯ, ಭಕ್ತಿಗೀತೆ ಮತ್ತು ಸಂಭ್ರಮದ ವಾತಾವರಣ ನಿರ್ಮಾಣವಾಗುತ್ತದೆ.
ಈ ಸಂಭ್ರಮಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚವನ್ನು ಸಮಾಜದವರು ಸ್ವಂತವಾಗಿ ಭರಿಸಿದ್ದಾರೆ. ಯಾವುದೇ ಹೊರಗಿನ ಅನುದಾನವಿಲ್ಲದೆ ತಮ್ಮ ಶ್ರಮ ಮತ್ತು ಸಂಪನ್ಮೂಲಗಳಿoದ ಮೇಳವನ್ನು ನಡೆಸುತ್ತಿರುವುದು ಗಮನಾರ್ಹ. ಇದು ಗುನಗಿ ಸಮಾಜದ ಭಕ್ತಿ, ಸಂಸ್ಕೃತಿ ಪ್ರೇಮ ಮತ್ತು ಸಮೂಹ ಶಕ್ತಿಯ ಪ್ರತೀಕವಾಗಿದೆ.