ಸಿದ್ದಾಪುರ ಕೋರ್ಟಿಗೆ ಬಂದ ವೇಳೆ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ಆರೋಪಿ ಮತ್ತೆ ಸಿಕ್ಕಿಬಿದ್ದಿದ್ದು, ಆ ಆರೋಪಿಗೆ ನ್ಯಾಯಾಲಯ ಮತ್ತೆ ಮೂರು ತಿಂಗಳ ಜೈಲು ಶಿಕ್ಷೆ ಪ್ರಕಟಿಸಿದೆ. ಮೂರು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಗೆ ಮೂರು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ಸೂಚಿಸಿದೆ.
2023ರ ಅವಧಿಯಲ್ಲಿ ಸಿದ್ದಾಪುರದಲ್ಲಿ ನಡೆದ ಪ್ರಕರಣವೊಂದರದಲ್ಲಿ ಶಿವಮೊಗ್ಗ ಶಿಕಾರಿಪುರದ ಹಳ್ಳೂರಕೇರಿಯ ಜಿಯಾವುಲ್ಲಾ ಅವರು ಎರಡನೇ ಆರೋಪಿಯಾಗಿದ್ದರು. ಈ ಹಿನ್ನಲೆ ಪೊಲೀಸರು ಜಿಯಾವುಲ್ಲಾ ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯದ ಪೊಲೀಸರ ಕಣ್ತಪ್ಪಿಸಿ ಜಿಯಾವುಲ್ಲಾ ಅಲ್ಲಿಂದ ಪರಾರಿಯಾಗಿದ್ದರು. ಮೂರು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಜಿಯಾವುಲ್ಲಾ ಅವರನ್ನು ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದರು. ಜಿಯಾವುಲ್ಲಾ ಅವರು ಭಟ್ಕಳದಲ್ಲಿ ಅಡಗಿರುವ ಮಾಹಿತಿ ಆಧರಿಸಿ ಅಲ್ಲಿ ಪೊಲೀಸರು ದಾಳಿ ಮಾಡಿದರು.
ಏಪ್ರಿಲ್ 6ರಂದು ಸಿಕ್ಕಿಬಿದ್ದ ಜಿಯಾವುಲ್ಲಾ ಅವರನ್ನು ಪೊಲೀಸರು ಸಿದ್ದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ಹಿಂದೆ ನ್ಯಾಯಾಲಯದಿಂದಲೇ ತಪ್ಪಿಸಿಕೊಂಡು ಪರಾರಿಯಾಗಿದನ್ನು ವಿವರಿಸಿದರು. ನ್ಯಾಯಾಲಯದ ಆವರಣದಲ್ಲಿಯೇ ಉದ್ಧಟತನ ತೋರಿದ ಕಾರಣ ಜಿಯಾವುಲ್ಲಾ ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಲು ನಿರ್ಧರಿಸಿತು. ಅದರ ಪ್ರಕಾರ ಮೂರು ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತು. ಸಿದ್ದಾಪುರ ಪಿಸೈ ಶಾಂತಿನಾಥ ಪಾಸಾನೆ, ಪೊಲೀಸ್ ಸಿಬ್ಬಂದಿ ಚೇತನಕುಮಾರ, ಅನಿಲ್ ನಾಯ್ಕ, ಪ್ರಸನ್ನ ನಾಯ್ಕ, ಭರತಕುಮಾರ, ಶಶಿಕಾಂತ ಹಾಗೂ ನ್ಯಾಯಾಲಯ ಸಿಬ್ಬಂದಿ ಮೋಹನ ಲಮಾಣಿ ಈ ಕಾರ್ಯಾಚರಣೆ ನಡೆಸಿದ್ದರು.