ಮುರುಡೇಶ್ವರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಪದೇ ಪದೇ ಅಪರಾಧ ಚಟುವಟಿಕೆ ನಡೆಸುತ್ತಿದ್ದ ಐವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಹೊರ ಹಾಕಲಾಗಿದೆ. ಕಳೆದ ಎರಡು ದಿನದ ಅವಧಿಯಲ್ಲಿ ಐದು ರೌಡಿಗಳಿಗೆ ಪೊಲೀಸರು ನಡುಕ ಹುಟ್ಟಿಸಿದ್ದಾರೆ.
ಮುರುಡೇಶ್ವರ ಚಂದ್ರಹಿತ್ಲುವಿನ ಭಾಸ್ಕರ ಮಹಾದೇವ ನಾಯಕ ಅವರು 5 ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದರು. 40 ವರ್ಷದ ಅವರ ಮೇಲೆ ಪೊಲೀಸರು ಕೆಲ ವರ್ಷದಿಂದ ನಿಗಾವಹಿಸಿದ್ದರು. ಸಾಕಷ್ಟು ಎಚ್ಚರಿಕೆ ನೀಡಿದರೂ ಭಾಸ್ಕರ ನಾಯಕ ಅವರು ಅಪರಾಧ ಚಟುವಟಿಕೆಗಳನ್ನು ಕಡಿಮೆ ಮಾಡಿರಲಿಲ್ಲ. ಚಾಲಕ ವೃತ್ತಿಯ ಜೊತೆ ಅವರು ಅವರಿವರನ್ನು ಬೆದರಿಸುವ ಕಾಯಕವನ್ನು ಮುಂದುವರೆಸಿದ್ದರು. ಈ ಎಲ್ಲಾ ಹಿನ್ನಲೆ ಭಾಸ್ಕರ ನಾಯಕ ಅವರ ಗಡಿಪಾರಿಗೆ ಆದೇಶವಾಗಿದ್ದು, ಭಾಸ್ಕರ ನಾಯಕ ಅವರನ್ನು ಪೊಲೀಸರು ಭಾಗಲಕೋಟೆ ಜಿಲ್ಲೆಯ ನಗನಗರಕ್ಕೆ ಕರೆದೊಯ್ದು ಬಿಟ್ಟು ಬಂದರು.
ಮುರುಡೇಶ್ವರ ಬಳಿಯೇ ವ್ಯಾಪಾರ-ವ್ಯವಹಾರ ಮಾಡಿಕೊಂಡಿದ್ದ 36 ವರ್ಷದ ರಾಜು ಮಹಾದೇವ ನಾಯಕ ಅವರು ಸಹ 9 ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯಾಗಿದ್ದರು. ರಾಜು ನಾಯಕ ಅವರಿಗೂ ಪೊಲೀಸರು ಸಾಕಷ್ಟು ತಿಳುವಳಿಕೆ ಮೂಡಿಸಿದ್ದರು. ಅಪರಾಧ ಪ್ರಕರಣಗಳಲ್ಲಿ ಭಾಗಿಯಾದರೆ ಗಡಿಪಾರು ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದರು. ಅದಾಗಿಯೂ, ರಾಜು ನಾಯಕ ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಊರಿನಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ರಾಜು ನಾಯಕ ಅವರನ್ನು ಸಹ ಗಡಿಪಾರು ಮಾಡಲು ಪೊಲೀಸರು ನಿರ್ಧರಿಸಿದ್ದರು. ಅದರ ಪ್ರಕಾರ, ಭಟ್ಕಳ ಉಪವಿಭಾಗಾಧಿಕಾರಿಗಳಿಗೆ ಶಿಫಾರಸ್ಸು ಮಾಡಿ, ಗಡಿಪಾರು ಆದೇಶಪಡೆದರು. ಸದ್ಯ ರಾಜು ನಾಯಕ ಅವರನ್ನು ಪೊಲೀಸರು ಬೀದರ್ ಜಿಲ್ಲೆಯ ನ್ಯೂಟನ್ ಗ್ರಾಮಕ್ಕೆ ಕರೆದೊಯ್ದು ಅಲ್ಲಿಯೇ ಬಿಟ್ಟು ಬಂದರು.
ಮುರುಡೇಶ್ವರ ಚಂದ್ರಹಿತ್ಲುವಿನಲ್ಲಿದ್ದ ಕೇಶವ ಋತಿಕ ಮಹಾದೇವ ನಾಯಕ ಅವರು ತಮ್ಮ 27ನೇ ವಯಸ್ಸಿನಲ್ಲಿಯೇ ಅಪರಾಧ ಲೋಕದಲ್ಲಿ ಹೆಸರುಗಳಿಸಿದ್ದು, 6 ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದರು. ಸಾಕಷ್ಟು ಬಾರಿ ಪೊಲೀಸರು ಕೇಶವ ಋತಿಕ ನಾಯಕ ಅವರಿಗೂ ಎಚ್ಚರಿಕೆ ನೀಡಿದ್ದರು. ಅಡ್ಡದಾರಿ ಹಿಡಿದಯಂತೆ ಸಾಕಷ್ಟು ಸಲಹೆ ನೀಡಿದ್ದರು. ಅದಾಗಿಯೂ, ಕೇಶವ ಋತಿಕ ಮಹಾದೇವ ನಾಯಕ ಅವರು ಅಪರಾಧ ಚಟುವಟಿಕೆಯಲ್ಲಿ ಮುಂದುವರೆದಿದ್ದು, ಅವರಿಗೆ ಬುದ್ದಿ ಕಲಿಸಲು ಪೊಲೀಸರು ನಿರ್ಧರಿಸಿದ್ದರು. ಗಡಿಪಾರು ಆದೇಶಕ್ಕಾಗಿ ಹಿರಿಯ ಅಧಿಕಾರಿಗಳಲ್ಲಿ ನಿವೇದಿಸಿ, ಅವರನ್ನು ಗದಗ ಜಿಲ್ಲೆಯ ಬೆಟಗೇರಿ ವ್ಯಾಪ್ತಿಗೆ ಗಡಿಪಾರು ಮಾಡಿದರು.
ಇದರೊಂದಿಗೆ ರೂಮ್ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ ಬೈಲೂರಿನ ಗಣೇಶ ಬಾಬು ನಾಯಕ ಅವರು ಸಹ ತಮ್ಮ 25 ವರ್ಷದಲ್ಲಿಯೇ ನಾಲ್ಕು ಅಪರಾಧ ಪ್ರಕರಣದಲ್ಲಿ ಭಾಗಿ ಆಗಿದ್ದರು. ಅದರೊಂದಿಗೆ ಮುರುಡೇಶ್ವರ ಕನ್ನಡ ಶಾಲೆ ಬಳಿಯ ಗಣೇಶ ಜಾಕ್ಲಿ ಜಯಂತ ನಾಯಕ ಅವರು ತಮ್ಮ 23 ವರ್ಷದೊಳಗೆ 5 ಕ್ರಿಮಿನಲ್ ಪ್ರಕರಣದಲ್ಲಿ ತೊಡಗಿದ್ದರು. ಈ ಎರಡು ಜನರ ಮೇಲೆ ಪೊಲೀಸರು ನಿಗಾವಹಿಸಿದ್ದು, ಸರ್ಕಾರಿ ದಾಖಲೆಗಳಲ್ಲಿಯೇ ಅವರಿಬ್ಬರನ್ನು ರೌಡಿ ಶೀಟರ್ ಎಂದು ಗುರುತಿಸಿದ್ದರು. ಅವರಿಬ್ಬರ ರಂಪಾಟ ಜಾಸ್ತಿ ಆದ ಹಿನ್ನಲೆ ಇಬ್ಬರನ್ನು ಉತ್ತರ ಕನ್ನಡ ಜಿಲ್ಲೆ ಬಿಟ್ಟು ಹೊರಗೆ ಓಡಿಸಿದರು. ಸದ್ಯ ಗಣೇಶ ನಾಯಕ ಅವರು ವಿಜಯಪುರ ಜಿಲ್ಲೆಯ ಗಾಂಧೀಚೌಕಕ್ಕೆ ಹಾಗೂ ಗಣೇಶ ಜಾಕ್ಲಿ ನಾಯಕ ಅವರು ಕಲಬುರಗಿ ಜಿಲ್ಲೆಯ ಚೌಕ್ ಗ್ರಾಮಕ್ಕೆ ಗಡಿಪಾರು ಆಗಿದ್ದಾರೆ. ಆರು ತಿಂಗಳ ಕಾಲ ಈ ಎಲ್ಲರಿಗೂ ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸದ ಹಾಗೇ ಸೂಚಿಸಲಾಗಿದೆ.
ದುಡಿದು ತಿನ್ನುವ ವಯಸ್ಸಿನಲ್ಲಿಯೇ ಅಡ್ಡದಾರಿಹಿಡಿದು ರೌಡಿ ವರ್ತನೆ ತೋರಿದವರ ಮೇಲೆ ಪೊಲೀಸರು ನಿಗಾವಹಿಸಿದ್ದು, ಕಾನೂನುಬಾಹಿರ ಚಟುವಟಿಕೆ ನಡೆಸುವವರಿಗೆ ಕಠಿಣ ಸಂದೇಶ ರವಾನಿಸಿದ್ದಾರೆ. ಅದಾಗಿಯೂ, ರೌಡಿ ವರ್ತನೆ ಮುಂದುವರೆದರೆ ಗಡಿಪಾರು ಸೇರಿ ಇನ್ನಷ್ಟು ಬಗೆಯ ಕ್ರಮ ಜರುಗಿಸುತ್ತಿದ್ದಾರೆ.