ಹುಬ್ಬಳ್ಳಿ-ಅಂಕೋಲಾ ಮಾರ್ಗವಾಗಿ ಸಂಚರಿಸುತ್ತಿದ್ದ ಕಾರು ಯಲ್ಲಾಪುರದ ಅರಬೈಲ್ ಘಟ್ಟ ಪ್ರದೇಶದಲ್ಲಿ ಅಗ್ನಿಗೆ ಆಹುತಿಯಾಗಿದ್ದು, ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಕಾರಿನಲ್ಲಿ ಸುಟ್ಟು ಕರಕಲಾದ ವ್ಯಕ್ತಿಯ ವಿವರವೂ ಗೊತ್ತಾಗಿದೆ.
ಬೆಳಗಾವಿ ಕನ್ನಬರಗಿ ರಸ್ತೆಯ ನಿತೀಶ್ ಜಗನ್ನಾಥ ದಾಪಳೆ ಅವರು ಬುಧವಾರ ಈ ಮಾರ್ಗದಲ್ಲಿ ಕಾರು ಓಡಿಸಿಕೊಂಡು ಬಂದಿದ್ದರು. ಅದೇ ಕಾರು ಅರಬೈಲ್ ಬಳಿಯ ತಾಳೆಕುಂಬ್ರಿ ಬಸ್ ನಿಲ್ದಾಣ ಸಮೀಪ ಅಪಘಾತಕ್ಕೀಡಾಗಿತ್ತು. ಕಾರಿನ ವೇಗ ಜಾಸ್ತಿಯಾಗಿರುವುದೇ ಅಪಘಾತಕ್ಕೆ ಕಾರಣ ಎಂಬ ಮಾಹಿತಿಯಿದ್ದು, ಕಾರು ಕಂದಕದ ಕಡೆ ಬಿದ್ದಾಗ ಅದಕ್ಕೆ ಬೆಂಕಿ ತಗುಲಿತು. ಕಾರಿಗೆ ಏಕಾಏಕಿ ಬೆಂಕಿ ತಗುಲಿದ್ದರಿಂದ ಒಳಗಿದ್ದ ವ್ಯಕ್ತಿಗೆ ಹೊರ ಬರುವ ಅವಕಾಶ ಸಿಗಲಿಲ್ಲ. ಹೀಗಾಗಿ ಅದೇ ಕಾರಿನಲ್ಲಿ ಚಾಲಕನ ಆಸನದಲ್ಲಿದ್ದವರು ಸಜೀವವಾಗಿ ದಹನವಾದರು.
ವೆಕ್ಸೋವೇಗನ್ ಕಂಪನಿಗೆ ಸೇರಿದ ಕಾರು ಇದಾಗಿದ್ದು, ಕಾರಿನ ಮಾಲಕ ಹಾಗೂ ಸಾವನಪ್ಪಿದವರ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದರು. ಕಾರಿನ ಒಳಗಿದ್ದ ದೇಹ ಗುರುತು ಸಿಗದಷ್ಟರ ಮಟ್ಟಿಗೆ ಕರಕಲಾಗಿದ್ದು, ಎಲುಬು ಮಾತ್ರ ಕಾಣುವ ಸ್ಥಿತಿಯಲ್ಲಿತ್ತು. ಕಾರಿನ ದಾಖಲೆಗಳು ಸಹ ಸಂಪೂರ್ಣವಾಗಿ ಸುಟ್ಟಿದ್ದವು. ಪ್ರಾಥಮಿಕ ಮಾಹಿತಿ ಪ್ರಕಾರ ನಿತೀಶ್ ದಾಪಳೆ ಅವರೇ ಕಾರು ಓಡಿಸಿಕೊಂಡು ಬಂದಿದ್ದು, ಅವರೇ ಅಲ್ಲಿ ಸಜೀವ ದಹನವಾಗಿರುವ ಶಂಕೆಯಿದೆ. ಕಾರಿನ ನೋಂದಣಿ ಆಧಾರದಲ್ಲಿ ಪೊಲೀಸರು ಮಾಲಕರ ಪತ್ತೆಗೆ ಮುಂದಾದರು. ಬೆಳಗಾವಿಯಿಂದ ಯಲ್ಲಾಪುರಕ್ಕೆ ಬಂದ ಜಗನ್ನಾಥ ದಾಪಳೆ ಅವರು ಕಾರನ್ನು ಗುರುತಿಸಿದರು. `ಇದು ತಮ್ಮ ಮಗನ ಕಾರು’ ಎಂದು ಅವರು ಮಾಹಿತಿ ನೀಡಿದರಾದರೂ ಮಗ ನಿತೀಶ್ ದಾಪಳೆ ಅವರು ಸಾವನಪ್ಪಿರುವುದನ್ನು ಅವರು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ.
ಅದಾಗಿಯೂ, ಕಾರು ಸುಟ್ಟಿರುವ ಬಗ್ಗೆ ಜಗನ್ನಾಥ ಪಿಕಳೆ ಅವರು ಪೊಲೀಸ್ ದೂರು ನೀಡಿದರು. ಸಾವನಪ್ಪಿದ ವ್ಯಕ್ತಿ ತಮ್ಮ ಮಗನಾ? ಅಥವಾ ಬೇರೆಯವರಾ? ಎನ್ನುವುದರ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಮನವಿ ಮಾಡಿದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಅಧೀನ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದರು. ಅದರನ್ವಯ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಾರು ಅಗ್ನಿ ಅವಘಡಕ್ಕೆ ಒಳಗಾದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.