ಕೆಡಿಸಿಸಿ ಬ್ಯಾಂಕ್ ಚುನಾವಣೆಯ ಮೇಲೆಯೂ ಪ್ರಭಾವ ಬೀರಿದ್ದ ಕುಮಟಾ ಬರಗದ್ದೆ ಸೊಸೈಟಿಯ ಅಪರಾತಪರ ಪ್ರಕರಣ ಇನ್ನೊಂದು ತಿರುವುಪಡೆದಿದೆ. ಕುಮಟಾದ ಬರಗದ್ದೆ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ಅವ್ಯವಹಾರ ಪ್ರಕರಣಕ್ಕೆ ಸಂಬAಧಿಸಿ ಮುಖ್ಯ ಆರೋಪಿ ಲಕ್ಷ್ಮಣ ಎಚ್ ಪಟಗಾರ ಅವರನ್ನು ತನಿಖಾಧಿಕಾರಿಗಳು ವಶಕ್ಕೆಪಡೆದಿದ್ದಾರೆ.
ಲಕ್ಷ್ಮಣ ಹನುಮಂತ ಪಟಗಾರ ಅವರು ಈ ಸೊಸೈಟಿಯ ಕಾರ್ಯದರ್ಶಿಯಾಗಿದ್ದರು. ರೈತರಿಗೆ ನೀಡಿದ್ದ ಕೋಟ್ಯಂತರ ರೂಪಾಯಿಯ ಬೆಳೆ ಸಾಲ ಹಾಗೂ ಮಾಧ್ಯಮಿಕ ಸಾಲವನ್ನು ಅವರು ದುರುಪಯೋಗಪಡಿಸಿಕೊಂಡಿದ್ದರು. ಇದೇ ಆರೋಪದ ಅಡಿ ಸಿಒಡಿ ಪೊಲೀಸರು ಬುಧವಾರ ಲಕ್ಷ್ಮಣ ಪಟಗಾರ ಅವರನ್ನು ಬಂಧಿಸಿದ್ದಾರೆ. 2017-18ನೇ ಸಾಲಿನಿಂದ 2020-21ರವರೆಗೆ ನಡೆದ 2.31 ಕೋಟಿ ರೂಪಾಯಿಯ ಅವ್ಯವಹಾರದ ಬಗ್ಗೆ ತನಿಖಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
2011 ರಿಂದ 2020ರವರೆಗೆ ಸಂಘದ ಮುಖ್ಯ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ ಪಟಗಾರ ಅವರ ವಿರುದ್ಧ ಸಂಘದ ಅಧ್ಯಕ್ಷ ಗಣಪತಿ ಗೋಪಾಲಕೃಷ್ಣ ಹೆಗಡೆ ಅವರು 2023ರಲ್ಲಿ ಕುಮಟಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೆಡಿಸಿಸಿ ಬ್ಯಾಂಕಿನಿoದ ರೈತರ ಉಳಿತಾಯ ಖಾತೆಗೆ ಜಮೆ ಆಗಬೇಕಿದ್ದ ಹಣ ದುರುಪಯೋಗ ಆದ ಹಿನ್ನಲೆ ಸಂಘದವರೇ ಪಟಗಾರರನ್ನು ಅಮಾನತು ಮಾಡಿದ್ದರು. ಅದಾದ ನಂತರ ಈ ಪ್ರಕರಣ ಸಿಒಡಿ ತನಿಖೆಗೆ ಶಿಫಾರಸ್ಸು ಆಗಿದ್ದು, ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಬೆಂಗಳೂರು ಸಿಒಡಿ ರವಿ ಸಿ ವಿ ನೇತ್ರತ್ವದ ತಂಡ ನಾಲ್ಕು ದಿನಗಳ ಹಿಂದೆಯೇ ಕುಮಟಾಗೆ ಆಗಮಿಸಿತು. ಬುಧವಾರ ಕುಮಟಾ ಸಿದ್ದನಬಾವಿಯಲ್ಲಿರುವ ಲಕ್ಷ್ಮಣ ಪಟಗಾರ ಅವರ ಮನೆ ಮೇಲೆ ದಾಳಿ ನಡೆಸಿ, ಅಲ್ಲಿಯೇ ಅವರನ್ನು ಬಂಧಿಸಿತು.
ಸದ್ಯ ಕುಮಟಾ ನ್ಯಾಯಾಲಯಕ್ಕೆ ಲಕ್ಷ್ಮಣ ಪಟಗಾರ ಅವರನ್ನು ಹಾಜರುಪಡಿಸಲಾಗಿದೆ. ಸರ್ಕಾರಿ ಅಭಿಯೋಜಕ ಗಿರೀಶ ಪಟಗಾರ ಅವರು ವಾದ ಮಂಡಿಸಿ ಆರೋಪಿಯ ವಿಚಾರಣೆಗೆ ಮನವಿ ಮಾಡಿದ್ದು, ನ್ಯಾಯಾಲಯ ಎರಡು ದಿನದ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಈ ಮೊದಲು ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದ ಶ್ರೀಧರ ಭಾಗ್ವತ ಅವರು ಲಕ್ಷ್ಮಣ ಪಟಗಾರ ಅವರ ಪರ ಒಲವು ತೋರಿದ ಕಾರಣ ಕೆಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಹೀಗಾಗಿ ಕೆಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸಹ ಈ ಪ್ರಕರಣ ಸದ್ದು ಮಾಡಿತ್ತು.