ಯಲ್ಲಾಪುರ – ಶಿರಸಿ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನವೊಂದರಿಂದ ರಕ್ತ ಸುರಿಯುತ್ತಿದ್ದು, ಮಂಚಿಕೇರಿ ಬಳಿ ಆ ವಾಹನವನ್ನು ಜನ ಅಡ್ಡಗಟ್ಟಿದ್ದಾರೆ. ಈ ವೇಳೆ ಎಲ್ಲಾ ಬಾಗಿಲು ಮುಚ್ಚಿದ ವಾಹನದಲ್ಲಿ ದನಗಳನ್ನು ಸಾಗಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ.
ತಕ್ಷಣ ಜನ ಆ ಗಾಡಿಯನ್ನು ಮಂಚಿಕೇರಿ ಪೊಲೀಸ್ ಠಾಣೆಗೆ ಒಯ್ದರು. ಅಲ್ಲಿದ್ದ ಪೊಲೀಸ್ ಸಿಬ್ಬಂದಿ ದೀಪಕ ನಾಯ್ಕ ಅವರು ದಾಖಲೆಗಳ ತಪಾಸಣೆ ಮಾಡಿದರು. ಈ ವೇಳೆ ಗೋವುಗಳನ್ನು ಹುಲೆಕಲ್ ಬಳಿಯ ಗೋಶಾಲೆಗೆ ಒಯ್ಯುತ್ತಿರುವುದಾಗಿ ಆ ಗಾಡಿಯವರು ತಿಳಿಸಿದರು. ಅಲ್ಲಿದ್ದ ಫಕೀರಪ್ಪ ಭೋವಿವಡ್ಡರ, ನಿತಿನ್ ನಾಯ್ಕ, ಪವನ ನಾಯ್ಕ, ಮುನ್ನ ಸುಗಮ, ಪ್ರಥಮ್ ನಾಯ್ಕ ಅವರು ವಾಹನದಲ್ಲಿದ್ದವರ ವಿವರ ವಿಚಾರಿಸಿದರು.
ಅಮಿತ್ ಗಬ್ಬುರ್, ನಾಗರಾಜ ಭೋವಿವಡ್ಡರ , ರಿಹಾನ್ ಶೇಕ್, ನಿತಿನ್ ನಾಯ್ಕ, ರಾಘವೇಂದ್ರ ಭಟ್ಟ, ಗಣಪತಿ ಹಾಗೂ ಜಾಫರ್ ಸೇರಿ ಆ ಜಾನುವಾರುಗಳು ಗೋಶಾಲೆಗೆ ಹೋಗುತ್ತಿರುವುದನ್ನು ಖಚಿತಪಡಿಸಿಕೊಂಡರು. ಹಿಂಸಾತ್ಮಕ ರೀತಿಯಲ್ಲಿ ಹಸು ಸಾಗಾಟ ಮಾಡದಂತೆ ಎಲ್ಲರೂ ಸೇರಿ ವಾಹನದವರಿಗೆ ಸೂಚನೆ ನೀಡಿದರು. ನಂತರ ಜಾನುವಾರುಗಳಿಗೆ ಆಹಾರ-ನೀರು ಒದಗಿಸಿ ಗೋಶಾಲೆಗೆ ಕಳುಹಿಸಿದರು.