ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಮುಂಡಗೋಡಿನ ಕೆಲವರು ಕಳೆದುಕೊಂಡಿದ್ದ ಚಿನ್ನಾಭರಣಗಳು ಮರಳಿ ಸಿಕ್ಕಿದ್ದು, ಕೋಟ್ಯಂತರ ರೂ ಮೌಲ್ಯದ ಆಭರಣವನ್ನು ಪೊಲೀಸರು ಮಾಲಕರಿಗೆ ಒಪ್ಪಿಸಿದ್ದಾರೆ.
ಕಳ್ಳತನ ಪ್ರಕರಣಗಳನ್ನು ಬೆನ್ನತ್ತಿದ ಪೊಲೀಸರಿಗೆ ಕಳ್ಳರು ಸಿಕ್ಕಿಬಿದ್ದಿದ್ದು, ಅವರು ಕದ್ದ ಆಭರಣ ಹಾಗೂ ಹಣವನ್ನು ಪೊಲೀಸರು ಜಪ್ತು ಮಾಡಿದ್ದಾರೆ. ನ್ಯಾಯಾಲಯದ ಅನುಮತಿಪಡೆದು ಆ ಚಿನ್ನಾಭರಣ ಹಾಗೂ ಹಣವನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ. ಶಿರಸಿ ನಗರ ಠಾಣೆ, ಮಾರುಕಟ್ಟೆ ಠಾಣೆ, ಬನವಾಸಿ ಠಾಣೆ, ಶಿರಸಿ ಗ್ರಾಮೀಣ ಠಾಣೆ, ಮುಂಡಗೋಡ, ಯಲ್ಲಾಪುರ ಮತ್ತು ಸಿದ್ದಾಪುರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕ ಸ್ವತ್ತುಗಳನ್ನು ಮಾಲಕರಿಗೆ ಕೊಡಲಾಗಿದೆ. ಒಟ್ಟು 17 ಪ್ರಕರಣಗಳ ಸ್ವತ್ತುಗಳು ಮರಳಿ ಮಾಲಕರ ಮನೆ ಸೇರಿದೆ.
ಶ್ರೀ ಗುರುಸಿದ್ದೇಶ್ವರ ಸಾಂಸ್ಕೃತಿಕ ಭವನದ ಬಣ್ಣದ ಮಠದಲ್ಲಿ ಈ ಎಲ್ಲಾ ಸಾಮಗ್ರಿಗಳನ್ನು ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಹಸ್ತಾಂತರಿಸಿದರು. `ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ ಸಮರ್ಪಣಾ ಮನೋಭಾವ ಮತ್ತು ಅತ್ಯುತ್ತಮ ಕಾರ್ಯವೈಖರಿಯಿಂದ ಈ ಎಲ್ಲಾ ಸ್ವತ್ತು ಸಿಕ್ಕಿದೆ’ ಎಂದವರು ಹೇಳಿದರು. ಡಿವೈಎಸ್ಪಿ ಗೀತಾ ಪಾಟೀಲ, ಶಿರಸಿ ವೃತ್ತದ ಸಿಪಿಐ ಶಶಿಕಾಂತ ವರ್ಮ, ಗ್ರಾಮೀಣ ಠಾಣೆ ಪಿಐ ರಮೇಶ ಹೂಗಾರ, ಯಲ್ಲಾಪುರದ ರಮೇಶ ಹಾನಾಪುರ, ಮುಂಡಗೋಡಿನ ರಂಗನಾಥ ನೀಲಮ್ಮನರ್, ಸಿದ್ದಾಪುರ ಠಾಣೆಯ ಜೆ ಬಿ ಸೀತಾರಾಮ ಇತರರು ಇದ್ದರು.