ಮಹಿಳಾ ಚಿತ್ರನಿರ್ದೇಶಕಿಯರ ಸೃಜನಶೀಲತೆ ಪ್ರೋತ್ಸಾಹಿಸುವುದಕ್ಕಾಗಿ ಗುಬ್ಬಿವಾಣಿ ಟ್ರಸ್ಟ್ ವಿನೂತನ ಯೋಜನೆಯೊಂದನ್ನು ಸಿದ್ಧಪಡಿಸಿದೆ. ಮೇ 24 ರ ಭಾನುವಾರ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ `ಅವಳ ಹೆಜ್ಜೆ ಕಿರುಚಿತ್ರೋತ್ಸವ 2026′ ನಡೆಯಲಿದ್ದು, ಸ್ಪರ್ಧೆಯಲ್ಲಿ ಗೆಲ್ಲುವ ಕೃತಿಗೆ 1 ಲಕ್ಷ ರೂಪಾಯಿಯ ಬಹುಮಾನ ಘೋಷಿಸಿದೆ.
ಸಿನೆಮಾ ರಂಗದಲ್ಲಿ ಹೆಣ್ಣಿನ ದೃಷ್ಟಿಕೋನವನ್ನು ಆಚರಿಸುವ ಈ ಹಬ್ಬದಲ್ಲಿ ಆಯ್ದ ಪ್ರಭಾವಶಾಲಿ ಕಿರುಚಿತ್ರಗಳ ಪ್ರದರ್ಶನವೂ ನಡೆಯಲಿದೆ. ಅಂದು ಬೆಳಿಗ್ಗೆ 10:00 ಗಂಟೆಗೆ ಅಧಿಕೃತವಾಗಿ ಚಾಲನೆ ಪಡೆಯಲಿರುವ ಈ ಚಿತ್ರೋತ್ಸವದಲ್ಲಿ ಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗಳು ತೆರೆಕಾಣಲಿವೆ. ಮೊದಲಾರ್ಧದಲ್ಲಿ ಅನು ಕುಲಕರ್ಣಿಯವರ ‘ಕಾಶಿ ಕೈಲಾಸ’, ಅಶ್ವಿನಿ ಅನೀಶ್ ಅವರ ‘ಸೋರುತಿಹುದು ಮನೆಯ ಮಾಳಿಗಿ’, ಸುಪ್ರಿಯಾ ಶಂಕರ ನಿಪ್ಪಾಣಿ ಅವರ ‘ರೊಟ್ಟಿ’, ಸೀಮಾ ಶಶಿಧರ್ ಅವರ ‘ಎ ಲಿಟ್ಲ್ ಕೇರ್’ ಮತ್ತು ಸೌರಭಾ ರಾವ್ ಅವರ ‘ಹುಲಿಯಪ್ಪ’ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ದ್ವಿತೀಯಾರ್ಧದಲ್ಲಿ ಸುಷ್ಮಾ ಭಾರದ್ವಾಜ್ ಅವರ `ದಾರಿ’, ಸುನಯನಾ ಸುರೇಶ್ ಅವರ `ಮೌನ ರಾಗ’, ಶ್ರೇಯ ಸುನಿಲ್ ಅವರ `ಆ ಮಾಡಿ’, ಹರ್ಷಿತ ಜಿ. ಹಾಗೂ ರಚನ ಸುವರ್ಣ ಜೋಡಿಯ ‘ಗೆಜ್ಜೆ’ ಮತ್ತು ವನು ಪಾಟೀಲ್ ಅವರ `ನಿತ್ಯ’ ಚಿತ್ರಗಳು ಪ್ರೇಕ್ಷಕರ ಮುಂದೆ ಬರಲಿವೆ. ಕೇವಲ ಸಿನಿಮಾ ನೋಡುವುದಷ್ಟೇ ಅಲ್ಲದೆ, ಪ್ರತಿಯೊಂದು ಪ್ರದರ್ಶನದ ನಂತರ ವೀಕ್ಷಕರು ನಿರ್ದೇಶಕಿಯರ ಜೊತೆ ಮುಖಾಮುಖಿಯಾಗಿ ಕಥೆ ಹಾಗೂ ತಂತ್ರಜ್ಞಾನದ ಕುರಿತು ಪ್ರಶ್ನಿಸುವ ಅಪರೂಪದ ಸಂವಾದವೂ ಇಲ್ಲಿರಲಿದೆ.
ಚಿತ್ರೋತ್ಸವದ ಮತ್ತೊಂದು ವಿಶೇಷ ಆಕರ್ಷಣೆ ಸಂಜೆ 5:00 ಗಂಟೆಗೆ ನಡೆಯಲಿರುವ “ಸಿನೆಮಾದಲ್ಲಿ ಅವಳ ಹೆಜ್ಜೆ ‘ಅ – ಅಃ’ ವರೆಗೆ” ಎಂಬ ಗಂಭೀರ ಚರ್ಚಾಗೋಷ್ಠಿ. ಚಿತ್ರೋತ್ಸವದ ಸಾರಥ್ಯ ವಹಿಸಿರುವ ಶಾಂತಲಾ ದಾಮ್ಲ ಅವರ ಸಾರಥ್ಯದಲ್ಲಿ ನಡೆಯುವ ಈ ಸಂವಾದದಲ್ಲಿ ಖ್ಯಾತ ನಟಿ ನೀತು ಶೆಟ್ಟಿ, ಗ್ರೀಷ್ಮಾ ಶ್ರೀಧರ್, ಸಂಗೀತಾ ನಂಜುAಡಸ್ವಾಮಿ ಹಾಗೂ ಸಂಜೋತಾ ಭಂಡಾರಿ ಚಿತ್ರರಂಗದಲ್ಲಿ ಮಹಿಳೆಯರ ಏಳುಬೀಳುಗಳ ಕುರಿತು ಅನಿಸಿಕೆ ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮದ ಆರಂಭದಲ್ಲಿ ಟ್ರಸ್ಟ್ನ ಸಂಸ್ಥಾಪಕಿ ಮಾಲವಿಕ ಗುಬ್ಬಿವಾಣಿ ಅವರು ಮಾತನಾಡಲಿದ್ದಾರೆ.
ಅಂತಿಮವಾಗಿ ಸಂಜೆ 6:00 ಗಂಟೆಗೆ ಸಿನೆಮಾ ಗಣ್ಯರ ಸಮ್ಮುಖದಲ್ಲಿ ತೀರ್ಪುಗಾರರ ನಿರ್ಧಾರದಂತೆ ವಿಜೇತರನ್ನು ಪ್ರಕಟಿಸಿ, ಪ್ರಶಸ್ತಿ ಹಾಗೂ 1 ಲಕ್ಷ ರೂಪಾಯಿ ನಗದು ಪುರಸ್ಕಾರವನ್ನು ಹಸ್ತಾಂತರಿಸಲಾಗುವುದು. ಕಲಾತ್ಮಕ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ ಈ ಉತ್ಸವ ಉತ್ತಮ ಅನುಭವ ನೀಡಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಆಯೋಜಕರು ಆಹ್ವಾನಿಸಿದ್ದಾರೆ.