`ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಕೈಗಾರಿಕಾ ಪ್ರದೇಶಗಳಿಗೆ ನಗರ ಸ್ಥಳೀಯ ಸಂಸ್ಥೆಯವರು ಮೂಲಭೂತ ಸೌಕರ್ಯ ಒದಗಿಸಬೇಕು’ ಎಂದು ಡೀಸಿ ಕೆ ಲಕ್ಷ್ಮೀಪ್ರಿಯಾ ಅವರು ಹೇಳಿದ್ದಾರೆ. ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೈಗಾರಿಕಾ ಸ್ಪಂದನ ಸಮಿತಿ ಸಭೆ ನಡೆಸಿದ ಅವರು `ಭಟ್ಕಳ, ದಾಂಡೇಲಿ, ಹಳಿಯಾಳ, ಕುಮಟಾ, ಯಲ್ಲಾಪುರ, ಶಿರಸಿ, ಶಿರವಾಡ ಮತ್ತು ರಾಮನಗರದಲ್ಲಿರುವ ಕೈಗಾರಿಕಾ ವಸಾಹತು ಪ್ರದೇಶದಲ್ಲಿನ ಬೇಡಿಕೆಗಳ ಬಗ್ಗೆ ಅಧಿಕಾರಿಗಳು ಮಾಹಿತಿಪಡೆದು, ಸೌಕರ್ಯ ಒದಗಿಸಬೇಕು’ ಎಂದು ನಿರ್ದೇಶನ ನೀಡಿದ್ದಾರೆ.
`ಮೂಲಭೂತ ಸೌಕರ್ಯಗಳ ಕುರಿತಂತೆ ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಉದ್ದಿಮೆದಾರರಿಂದ ಬೇಡಿಕೆಪಡೆಯಬೇಕು. ಅದನ್ನು ಜಿಲ್ಲಾ ನಗರಾಭಿವೃದ್ದಿ ಕೋಶದ ಅಧಿಕಾರಿಗಳಿಗೆ ಸಲ್ಲಿಸಬೇಕು. ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿನ ಬೇಡಿಕೆಗಳನ್ನು ಪ್ರಸಕ್ತ ಸಾಲಿನ ಕ್ರಿಯಾ ಯೋಜನೆಯಲ್ಲಿ ಈ ಕಾಮಗಾರಿಗಳನ್ನು ನಮೂದಿಸಿ, ಕೂಡಲೇ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಜೊತೆಗೆ ಆ ಕಾಮಗಾರಿಗಳನ್ನು ಕೈಗೊಳ್ಳಬೇಕು’ ಎಂದು ಸೂಚಿಸಿದರು. `ಹಲವು ವರ್ಷಗಳಿಂದ ಬಾಕಿ ಇದ್ದ ಕೈಗಾರಿಕಾ ವಸಾಹತುಗಳಿಗೆ ಸಂಬAದಿಸಿದ ನಕ್ಷೆಗಳನ್ನು ಸರಿಪಡಿಸಿ ಇ-ಸ್ವತ್ತು ನೀಡುವ ಕಾರ್ಯಕ್ಕೆ ಮುಂದಾಗಬೇಕು. ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಪ್ರಸ್ತುತ ಇ-ಸ್ವತ್ತುಗಳನ್ನು ವಿತರಣೆ ಮಾಡಬೇಕು. ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಬೇಕು’ ಎಂದು ಸೂಚಿಸಿದರು.
`ಕೈಗಾರಿಕಾ ವಸಾಹತುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಘಟಕಗಳು ಮತ್ತು ಸ್ಥಗಿತಗೊಂಡಿರುವ ಘಟಕಗಳ ಮಾಹಿತಿಯನ್ನು ಪ್ರತಿಯೊಂದು ಕೈಗಾರಿಕಾ ವಸಾಹತುಗಳಿಗೆ ಖುದ್ದು ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸಬೇಕು’ ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು. `ರಾಮನಗರ ಮತ್ತು ಕುಮಟಾ ಕೈಗಾರಿಕಾ ವಸಾಹತುಗೆ ನಿರಂತರ ವಿದ್ಯುತ್ ಪೂರೈಕೆ ಮಾಡಲು 33/1 ಕೆವಿ ಸಾಮರ್ಥ್ಯದ ವಿದ್ಯುತ್ ಉಪ ಕೇಂದ್ರ ಸ್ಥಾಪಿಸುವ ಕುರಿತು ಮತ್ತು ಅಂಬೇವಾಡಿ ಆಟೋ ನಗರ ಕೈಗಾರಿಕಾ ಪ್ರದೇಶದಲ್ಲಿ ನಿವೇಶನ ಹಂಚಿಕೆ ಕುರಿತು ಕೆ.ಐ.ಎ.ಡಿ.ಬಿ ಅವರ ನಿರ್ದೇಶನದಂತೆ ಕ್ರಮ ಕೈಗೊಳ್ಳಬೇಕು. ಕುಮಟಾ ತಾಲೂಕಿನ ಮಿರ್ಜಾನ್ ವಿಶ್ವ ಮಳಿಗೆ ನೋಂದಣಿ ಕುರಿತು ಅಗತ್ಯ ಕ್ರಮ ಕೈಗೊಳ್ಳಿ’ ಎಂದರು. `ಕುಮಟಾ ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕ ಫೀಡರ್ ಅಳವಡಿಸಲು ಅಂದಾಜುಪಟ್ಟಿ ಮಂಜೂರಾಗಿದ್ದು, ಭೂಗತ ಕೇಬಲ್ನ್ನು ರೈಲ್ವೆ ಟ್ರಾಕ್ ನ ಕೆಳಗೆ ಅಳವಡಿಸುವ ಕಾಮಗಾರಿ ಬಾಕಿ ಇದ್ದು, ಒಂದು ತಿಂಗಳ ಒಳಗೆ ಈ ಸಂಪೂರ್ಣ ಕಾಮಗಾರಿ ಮುಕ್ತಾಯವಾಗಲಿದೆ’ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದರು.
`ಜಿಲ್ಲೆಯಲ್ಲಿನ ಕೈಗಾರಿಕಾ ಘಟಕಗಳಲ್ಲಿ ಅಗತ್ಯವಿರುವ ತಾಂತ್ರಿಕ ಕೌಶಲ್ಯದ ಸಿಬ್ಬಂದಿಗಳ ಬಗ್ಗೆ ಕೈಗಾರಿಕೋದ್ಯಮಿಗಳಿಂದ ಮಾಹಿತಿ – ಬೇಡಿಕೆ ಪಡೆದು, ಜಿಲ್ಲೆಯಲ್ಲಿನ ಐಟಿಐ ಮತ್ತು ಡಿಪ್ಲೊಮೋ ಕಾಲೇಜಿನ ಮುಖ್ಯಸ್ಥರೊಂದಿಗೆ ಚರ್ಚಿಸಬೇಕು. ವಿದ್ಯಾರ್ಥಿಗಳಿಗೆ ಕೈಗಾರಿಕೆಗಳಲ್ಲಿನ ಬೇಡಿಕೆಗೆ ಅಗತ್ಯವಿರುವ ಕೌಶಲ್ಯ ತರಬೇತಿಗಳನ್ನು ಆಯೋಜಿಸಬೇಕು’ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ಈ ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ ನಾಯ್ಕ, ಜಿಪಂ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.