ಪಿಓಪಿ ಗಣೇಶ ಮೂರ್ತಿ ರಚನೆಗೆ ಸರ್ಕಾರ ನಿರ್ಬಂಧ ಹೇರಿದರೂ ಕೆಲವರು ಅದನ್ನೇ ಮಾಡಿರುವುದು ದೃಢವಾಗಿದೆ. ಕಾಳಿ ನದಿಯಲ್ಲಿ ವಿಸರ್ಜನೆಯಾದ ನೂರಾರು ಗಣಪನ ಮೂರ್ತಿಗಳು ಕರಗದೇ ತೇಲುತ್ತಿವೆ.
ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವಂತೆ ಉತ್ತರ ಕನ್ನಡ ಜಿಲ್ಲಾಡಳಿತ ಸಾಕಷ್ಟು ಅರಿವು ಮೂಡಿಸಿದೆ. ಅದಾಗಿಯೂ, ಕೆಲವಡೆ ಮಣ್ಣಿನ ಮೂರ್ತಿ ಬದಲು ಪಿಓಪಿ ಬಳಸಿ ಗಣೇಶನನ್ನು ರಚಿಸಲಾಗಿದೆ. ಅದರ ದುಷ್ಪರಿಣಾಮ ಇದೀಗ ಬೆಳಕಿಗೆ ಬಂದಿದ್ದು, ಕಾಳಿ ನದಿಯ ಎಲ್ಲಡೆ ಗಣಪನ ಮೂರ್ತಿಗಳು ಚದುರಿಕೊಂಡಿವೆ. ದಾಂಡೇಲಿಯ ನದಿ ಅಂಚಿನ ಸ್ವಚ್ಚತಾ ಕಾರ್ಯವೇ ಇದೀಗ ದೊಡ್ಡ ಸವಾಲಾಗಿದೆ.
ಮನೆ ಮನೆಯಲ್ಲಿ ಸ್ಥಾಪಿಸಿದ ಗಣಪನ ಜೊತೆ ಸಾರ್ವಜನಿಕ ಗಣಪನ ವಿಗ್ರಹಗಳು ಸಹ ನದಿ ಅಂಚಿನಲ್ಲಿ ಬಿದ್ದಿವೆ. ಪೂಜೆ ಸಲ್ಲಿಸಿದ ಭಕ್ತರು ಶ್ರದ್ಧಾಭಕ್ತಿಯಿಂದ ಕಾಳಿ ನದಿಯಲ್ಲಿ ಗಣೇಶನ ವಿಸರ್ಜನೆ ಮಾಡಿದ್ದು, ನೀರಿನ ಹರಿವು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ವಿಸರ್ಜಿತ ಗಣಪನ ಮೂರ್ತಿಗಳು ಸಂಪೂರ್ಣವಾಗಿ ಮುಳುಗದೇ ರಾಶಿ ರಾಶಿಯಾಗಿ ದಡ ಸೇರುತ್ತಿವೆ. ದೊಡ್ಡ ದೊಡ್ಡ ವಿಗ್ರಹಗಳು ನದಿಯಲ್ಲಿ ಮುಳುಗಲಾಗದೇ ಸಮಸ್ಯೆ ಸೃಷ್ಠಿಸಿದೆ. ಈ ಅವಶೇಷಗಳು ನದಿಯ ತಳದಲ್ಲಿ ಸಂಗ್ರಹವಾಗಿ ಹೂಳು ಹಾಗೂ ತ್ಯಾಜ್ಯ ಹೆಚ್ಚಿಸುವ ಸಾಧ್ಯತೆಗಳಿವೆ.