ಅರಣ್ಯವಾಸಿಗಳು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ಸಿದ್ದಾಪುರದ ಜನ ತಹಶೀಲ್ದಾರರ ಮೊರೆ ಹೋಗಿದ್ದಾರೆ. ರಾಜ್ಯ ಸರ್ಕಾರದ ನೀತಿಗೆ ವ್ಯತಿರಿಕ್ತವಾಗಿ ಜರುಗುತ್ತಿರುವ ಅರಣ್ಯವಾಸಿಗಳ ಜಂಟಿ ಮಹಜರ್ ಪ್ರಕ್ರಿಯೆಯ ನ್ಯೂನ್ಯತೆಯ ಬಗ್ಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯವರು ಗಮನಸೆಳೆದಿದ್ದಾರೆ.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಅವರ ನೇತ್ರತ್ವದಲ್ಲಿ ಹೋರಾಟಗಾರರು ಈ ದಿನ ಸಿದ್ದಾಪುರ ತಾಲೂಕಾ ದಂಡಾಧಿಕಾರಿ ಎಂ ಆರ್ ಕುಲಕರ್ಣಿ ಅವರನ್ನು ಭೇಟಿ ಮಾಡಿದರು. ಸರಕಾರದ ಆದೇಶ, ಸರಕಾರಿ ಅಧಿಕಾರಿಗಳಿಂದ ನಿರ್ಲಕ್ಷದಿಂದ ತಪ್ಪಾದ ಮಹಜರ್ ಪ್ರಕ್ರಿಯೆ ನಡೆಯುತ್ತಿದ್ದು, ಈ ಕುರಿತು ಸ್ಪಷ್ಟೀಕರಣ ನೀಡುವಂತೆ ಆಗ್ರಹಿಸಿದರು. ಅರಣ್ಯವಾಸಿಗಳಿಗೆ ನೋಟೀಸ್ ನೀಡದಿರುವುದು, ಮಹಜರ್ ಸಂದರ್ಭದಲ್ಲಿ ಅವಶ್ಯ ಅಧಿಕಾರ ವರ್ಗದವರ ಅನುಪಸ್ಥಿತಿ, ಜಂಟಿ ಮಹಜರ್ ಪ್ರಕ್ರಿಯೆಯಲ್ಲಿ ತಿರಸ್ಕರಿಸಿದ ಎಲ್ಲಾ ಅರ್ಜಿಗೆ ಸಂಬAಧಿಸಿ ಮಹಜರ್ ಪ್ರಕ್ರಿಯೆ ಅಳವಡಿಸದೇ ಇರುವುದರ ಬಗ್ಗೆ ಗಮನಸೆಳೆದರು.
ಅರ್ಜಿದಾರರ ಅನುಪಸ್ಥಿತಿಯಲ್ಲಿ ಮಹಜರ್ ಜರುಗಿಸುವುದು, ಪ್ರಿಂಟೆಡ್ ಮಹಜರ್ ದಾಖಲೆಯೊಂದಿಗೆ ಯಾಂತ್ರಿಕವಾಗಿ ಮಹಜರ್ ಪ್ರಕ್ರಿಯೆ ಜರುಗಿಸುವುದು ಹಾಗೂ ಮೂಲ ಅರ್ಜಿಯಲ್ಲಿ ದಾಖಲಿಸಿದ ಸಾಗುವಳಿ ಕ್ಷೇತ್ರ ಮಹಜರ್ ಉಲ್ಲೇಖಿಸದಿರುವ ಬಗ್ಗೆ ಆಕ್ಷೇಪಿಸಿದರು. ಕೆ ಟಿ ನಾಯ್ಕ ಕ್ಯಾದಗಿ, ಮಾಬ್ಲೇಶ್ವರ್ ನಾಯ್ಕ ಬೇಡ್ಕಣಿ ಅವರು ಈ ಬಗ್ಗೆ ಮಾತನಾಡಿದ್ದು, ನಾಗಪತಿ ಗೌಡ ಹುತ್ಗಾರ್, ಮಂಜುನಾಥ ಮಡಿವಾಳ ಕಿಲಾರ, ರಾಜು ನಾಯ್ಕ ಕಿರೇಕೋಡ, ದಿವಾಕರ ನಾಯ್ಕ ಬಾಳೇಜಡ್ಡಿ, ಮಂಜು ಹುತ್ಗಾರ್, ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಶಿವಾನಂದ ಹೊಸೂರು, ಸಿ,ಟಿ ನಾಯ್ಕ ಮುಂಡಿಗೆ ತಗ್ಗು, ಶ್ರೀಧರ್ ಹೆಗಡೆ ಅವರು ಧ್ವನಿಗೂಡಿಸಿದರು. ಮನವಿ ಸ್ವೀಕರಿಸಿದ ದಂಡಾಧಿಕಾರಿಗಳು `ಮಹಜರ್ ಸಮಸ್ಯೆಗಳ ಕುರಿತು ಶೀಘ್ರ ಜಿಲ್ಲಾಡಳಿತದ ಗಮನಕ್ಕೆ ತರಲಾಗುತ್ತದೆ’ ಎಂದರು.