ಪ್ಲಿಪ್‌ಕಾರ್ಟ್ ಮೂಲಕ 1.50 ಲಕ್ಷ ರೂ ಮೌಲ್ಯದ ಐಫೋನ್ ಆರ್ಡರ್ ಮಾಡಿದ ವ್ಯಕ್ತಿಯೊಬ್ಬರು ಅದನ್ನು ಪುಕ್ಕಟ್ಟೆಯಾಗಿಪಡೆದಿದ್ದಾರೆ. ಗ್ರಾಹಕ ಮಾಡಿದ ಮೋಸದ ಬಗ್ಗೆ ನಂತರ ಪ್ಲಿಪ್‌ಕಾರ್ಟ್ ಮಾರಾಟಗಾರರಿಗೆ ತಿಳಿದಿದ್ದು, ಡಿಲೆವರಿ ಬಾಯ್ ಮೂಲಕ ಸೇಲರ್ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಕುಮಟಾ ತಾಲೂಕಿನ ಮಿರ್ಜಾನಿನ ಜಿತೇಶ್ ದಿವಾಕರ ನಾಯ್ಕ ಅವರು ಕಳೆದ ನಾಲ್ಕು ವರ್ಷಗಳಿಂದ ಇನ್‌ಸ್ಟಾಕಾರ್ಟ್ ಸರ್ವಿಸಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಅವರು ಫ್ಲಿಪ್‌ಕಾರ್ಟ್ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಮಾರ್ಚ್ 6ರಂದು ಪೀಲ್ಡ್ಎಕ್ಸ್ ಮೊಬೈಲ್ ಅಪ್ಲಿಕೇಶನ್ ಮೂಲಕ ಬಂದ ಪಾರ್ಸಲ್‌ಗಳನ್ನು ಅವರು ಡೆಲಿವರಿ ಮಾಡಿದ್ದಾರೆ. ಈ ವೇಳೆ ಕೈ ಚಳಕ ಪ್ರದಶಿಸಿದ ಗ್ರಾಹಕರೊಬ್ಬರು ಪುಕ್ಕಟೆಯಾಗಿ ಐಫೋನ್‌ಪಡೆದಿದ್ದಾರೆ.
ಆ ದಿನ ಇಶಾನ್ ಎಂಬ ಹೆಸರಿನಲ್ಲಿ ಮೂರು ಪಾರ್ಸಲ್ ಇರುವುದನ್ನು ಜಿತೇಶ ನಾಯ್ಕ ಅವರು ನೋಡಿದ್ದಾರೆ. ಅಂಕೋಲಾ ಸಡಗೇರಿ ಬಳಿಯ ಗೋಕರ್ಣ ಕ್ರಾಸಿನ ಬಳಿ ಆ ವಿಳಾಸವಿದ್ದ ಕಾರಣ ಅಲ್ಲಿಗೆ ಹೋಗಿ ಫೋನ್ ಮಾಡಿದ್ದಾರೆ. ಕರೆ ಸ್ವೀಕರಿಸಿದ ಇಶಾನ್ ಎಂಬಾತರು ಪೆಟ್ರೋಲಿಯಂ ಪಂಪ್ ಹತ್ತಿರ ಬರಲು ಸೂಚಿಸಿದ್ದಾರೆ. ಅಲ್ಲಿಗೆ ಹೋದಾಗ ಅಲ್ಲಿ ಇಬ್ಬರು ಅಪರಿಚಿತರು ನಿಂತಿದ್ದು, ಅದರಲ್ಲಿ ಒಬ್ಬರು ಪಾರ್ಸಲ್‌ಪಡೆದಿದ್ದಾರೆ. ಈ ವೇಳೆ ಮತ್ತೊಬ್ಬ ವ್ಯಕ್ತಿ ಮಾತುಕಥೆ ನಡೆಸುತ್ತ ಜಿತೇಶ್ ನಾಯ್ಕ ಅವರ ಗಮನವನ್ನು ಬೇರೆಡೆ ಸೆಳೆದು ಇಶಾನ್ ಎಂಬ ಹೆಸರಿನಲ್ಲಿದ್ದ ಐಫೋನ್ ಪರಿಶೀಲಿಸುವ ಹಾಗೇ ನಟಿಸಿದ್ದಾರೆ. ಇಶಾನ್ ಅವರ ಜೊತೆಗಿದ್ದ ವ್ಯಕ್ತಿ ಈ ಪರಿಶೀಲನೆ ವೇಳೆ ಬಾಕ್ಸಿನ ಒಳಗೆ ತಮ್ಮ ಬಳಿಯಿದ್ದ ನಕಲಿ ಐಫೋನ್ ಇರಿಸಿ ನಿಜವಾದ ಐಫೋನ್ ಜೇಬಿಗೆ ಹಾಕಿಕೊಂಡಿದ್ದಾರೆ. ನಂತರ ಡಿಲೆವರಿ ಬಾಯ್ ಆಗಿದ್ದ ಜಿತೇಶ್ ನಾಯ್ಕ ಅವರ ಬಳಿ ಇಶಾನ್ ಅವರು `ಹೊಸ ಐಫೋನ್’ನ ಸಿಮ್ ಟ್ರೇ ತೋರಿಸು’ ಎಂದಿದ್ದಾರೆ. `ಓಪನ್ ಬಾಕ್ಸ್ ಡಿಲೆವರಿ’ ಮಾಡಿದಾಗ ಮೊಬೈಲ್ ಹಾಳಾಗಿದೆ ಎಂದು ಹೇಳಿ ಆ ಮೂರು ಪಾರ್ಸಲ್ ಕಾನ್ಸಲ್ ಮಾಡಿದ್ದಾರೆ. ಅದಾದ ನಂತರ ಪ್ಲಿಪ್‌ಕಾರ್ಟಿನಿಂದ ಆ ಹಣ ಗ್ರಾಹಕರಿಗೆ ಮರು ಸಂದಾಯವಾಗಿದೆ.
ಆ ಪಾರ್ಸಲ್ ಪ್ಲಿಪ್‌ಕಾರ್ಟ ಸೇಲರ್’ಗೆ ಮರಳಿದ್ದು, ಮೊಬೈಲ್ ಪರಿಶೀಲಿಸಿದಾಗ, ಅದರ ಐಎಮ್‌ಇಐ ಸಂಖ್ಯೆ ಆರ್ಡರ್ ಮಾಡಿದ ಮೊಬೈಲ್‌ನ ಸಂಖ್ಯೆ ಬೇರೆ ಬೇರೆಯಾಗಿರುವುದು ಗೊತ್ತಾಗಿದೆ. ಸೆಲ್ಲರ್ ಸಂಸ್ಥೆಯಾದ ಇಂಟರ್ನ್ಯಾಷನಲ್ ವ್ಯಾಲ್ಯೂ ರೀಟೈಲ್ ಪ್ರೈವೇಟ್ ಲಿಮಿಟೆಡ್ ಈ ಬಗ್ಗೆ ಇಮೇಲ್ ಮೂಲಕ ಮಾಹಿತಿ ನೀಡಿದ್ದು, ಆ ದಿನ ನಡೆದ ಮೋಸದ ಬಗ್ಗೆ ಜಿತೇಶ್ ನಾಯ್ಕ ಅವರಿಗೆ ಗೊತ್ತಾಗಿದೆ. ಸಂಶಯಾಸ್ಪದ ಆರೋಪಿತರಾಗಿ ಇಶಾನ್ ಹಾಗೂ ಮತ್ತೊಬ್ಬನ ಹುಡುಕಾಟ ನಡೆಸಿದ ಜಿತೇಶ್ ಅವರಿಗೆ ಆ ಕಳ್ಳರಿಬ್ಬರ ಸುಳಿವು ಸಿಕ್ಕಿಲ್ಲ. ಹೀಗಾಗಿ ಅವರು ಅವರಿಬ್ಬರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಅಂಕೋಲಾ ಪೊಲೀಸರು ಐಫೋನ್ ಕದ್ದವರ ಹುಡುಕಾಟ ಶುರು ಮಾಡಿದ್ದಾರೆ.