ಉತ್ತರ ಕನ್ನಡ ಜಿಲ್ಲೆಯ ಅರಬ್ಬಿ ಸಮುದ್ರದಲ್ಲಿ ಅನೇಕ ದ್ವೀಪಗಳಿದ್ದು, ಆ ದ್ವೀಪಗಳಿಗೆ ಗುರುತು ನೀಡಲು ಗೋವಾ ಸರ್ಕಾರ ಖ್ಯಾತೆ ತೆಗೆದಿದೆ.
ಕೇಂದ್ರ ಗೃಹ ಸಚಿವಾಲಯದ ದಾಖಲೆಗಳ ಪ್ರಕಾರ ಕಾರವಾರ ಕಡಲ ತೀರದಿಂದ 12 ನಾಟಿಕಲ್ ಮೈಲ್ ವ್ಯಾಪ್ತಿಗೆ ಸೇರಿದ ಕೆಲವು ದ್ವೀಪಗಳಿಗೆ ಗೋವಾದ ಯುನೀಕ್ ಐಡಿ ನೀಡಲಾಗಿದೆ. ಅದನ್ನು ಗುರುತಿಸಿ, ಸರಿಪಡಿಸುವಂತೆ ಉತ್ತರ ಕನ್ನಡ ಜಿಲ್ಲಾಡಳಿತವು ವರ್ಷಗಳ ಹಿಂದೆಯೇ ಕೇಂದ್ರಕ್ಕೆ ಪತ್ರವನ್ನು ಬರೆದಿದೆ. ಸದ್ಯ ಉತ್ತರ ಕನ್ನಡ ಜಿಲ್ಲಾಡಳಿತವು ಅರಬ್ಬಿ ಸಮುದ್ರದಲ್ಲಿ ತನ್ನ ವ್ಯಾಪ್ತಿಯಲ್ಲಿರುವ 24 ಸಣ್ಣಪುಟ್ಟ ದ್ವೀಪಗಳನ್ನು ಗುರುತಿಸಿ ಅದಕ್ಕೆ ಹೆಸರು ನೀಡಿದ್ದು, ಪ್ರವಾಸೋದ್ಯಮ ಅಭಿವೃದ್ಧಿಯ ಯೋಜನೆ ರೂಪಿಸಿದೆ. 16 ದ್ವೀಪಗಳ ಅಭಿವೃದ್ಧಿ ಸಂಬAಧ ಕರ್ನಾಟಕ ಮೆರಿಟೈಮ್ ಬೋರ್ಡ್ ಸುಮಾರು 1500 ಕೋಟಿ ರೂಪಾಯಿಯ ಯೋಜನೆ ರೂಪಿಸಲಾಗಿದೆ. ಆದರೆ, ಈ ಬೆಳವಣಿಗೆ ವಿರುದ್ಧ ಗೋವಾ ಸಕಾರ ಸಿಡಿದೆದ್ದಿದೆ.
`ಕಾರವಾರದ ಸಮೀಪವಿರುವುದು ಸೇರಿ ಹಲವು ದ್ವೀಪಗಳು ಹಿಂದೆ ಗೋವಾದ ಪೋರ್ಚುಗೀಸರ ಕೈವಶದಲ್ಲಿತ್ತು. ಇದರಿಂದ ಆ ಎಲ್ಲ ದ್ವೀಪಗಳೂ ಈಗಲೂ ಗೋವಾಕ್ಕೇ ಸೇರಬೇಕು’ ಎಂಬುದು ಗೋವಾ ಅಧಿಕಾರಿಗಳ ಅಂಬೋಣ. ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಅವರು ಸಹ ಇದೇ ವಾದ ಮಂಡಿಸುತ್ತಿದ್ದು, ಸದ್ಯ ದ್ವೀಪದ ವಿಷಯ ಗೋವಾ-ಕರ್ನಾಟಕ ನಡುವಿನ ಪತ್ರ ಗುದ್ದಾಟಕ್ಕೆ ಕಾರಣವಾಗಿದೆ.