ಶಿರಸಿ – ಹಾವೇರಿ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯ ವಿರುದ್ಧ ಪ್ರಯಾಣಿಕರ ಪ್ರತಿಭಟನೆ ಮುಂದುವರೆದಿದೆ. ಬಿಸಿಲಕೊಪ್ಪದಲ್ಲಿನ ಬಿಸಿಲ ಬೇಗೆಯನ್ನು ಲೆಕ್ಕಿಸದೇ ಪ್ರತಿಭಟನಾಕಾರರು ಧರಣಿ ನಡೆಸುತ್ತಿದ್ದಾರೆ.
ಶಿರಸಿ-ಹಾವೇರಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ರಸ್ತೆ ಸುಧಾರಣೆಗೆ ಸಾಕಷ್ಟು ಸಮಯಪಡೆದರೂ ಗುತ್ತಿಗೆ ಕಂಪನಿ ಅಭಿವೃದ್ಧಿ ಕೆಲಸಕ್ಕೆ ವೇಗ ನೀಡಿಲ್ಲ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಹ ಗುತ್ತಿಗೆದಾರರನ್ನು ಗಂಭೀರವಾಗಿ ವಿಚಾರಿಸಿಲ್ಲ. ಇದರ ಪರಿಣಾಮ ಜನ ಸಾಮಾನ್ಯರು ಸಮಸ್ಯೆ ಅನುಭವಿಸುತ್ತಿದ್ದು, ಅದೇ ಜನ ಸಾಮಾನ್ಯರು ಬೀದಿಗಿಳಿದು ಹೋರಾಟ ಶುರು ಮಾಡಿದ್ದಾರೆ.
ರಸ್ತೆಯಲ್ಲಿ ವಾಹನ ಓಡಾಡುವಾಗ ಉದ್ಬವಿಸುವ ಧೂಳಿನಿಂದ ಸ್ಥಳೀಯರು ಆರೋಗ್ಯ ಸಮಸ್ಯೆಗೆ ಒಳಗಾಗಿದ್ದಾರೆ. ಆ ರೋಗಿಗಳ ಜೊತೆ ರೋಗಿಗಳ ಆರೈಕೆದಾರರು ಸಹ ಆಗಮಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಜೊತೆಗೆ ದಿನವೂ ಇದೇ ದಾರಿಯಲ್ಲಿ ತಿರುಗಾಡುವ ಜನ ಹೆದ್ದಾರಿ ಅವ್ಯವಸ್ಥೆ ವಿರುದ್ಧ ಅಸಮಧಾನವ್ಯಕ್ತಪಡಿಸಿದ್ದಾರೆ. ತುರ್ತಾಗಿ ರಸ್ತೆ ರಿಪೇರಿ ನಡೆಯಬೇಕು ಎಂದು ಆಗ್ರಹಿಸಿ ಹೋರಾಟ ನಡೆಯುತ್ತಿದೆ.
ನೂರಾರು ಸಂಖ್ಯೆಯ ಜನ ಆಗಮಿಸಿ ಪ್ರತಿಭಟನೆಗೆ ಬೆಂಬಲ ನೀಡಿದ್ದು, ಅಧಿಕಾರಿಗಳನ್ನು ತರಾಠೆಗೆ ತೆಗೆದುಕೊಂಡಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಎನ್‌ಎಚ್‌ಎಐ ಪ್ರಾಜೆಕ್ಟ್ ಡೈರೆಕ್ಟರ್ ಶಿವಕುಮಾರ್ ಭೇಟಿ ನೀಡಿದಾಗ ಜನ ಅವರ ಬಳಿ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆ ಉತ್ತರ ಸಿಗದ ಕಾರಣ ಹಿಡಿಶಾಪ ಹಾಕಿದ್ದಾರೆ.