ಗೃಹ ಸಚಿವ ಜಿ ಪರಮೇಶ್ವರ ಅವರ ಆಪ್ತ ಗೋಪಾಲಕೃಷ್ಣ ನಾಯಕ ಅವರ ವಿರುದ್ಧ ವಿವಿಧ ಆರೋಪಿಸಿ ನ್ಯಾಯವಾದಿ ನಾಗರಾಜ ನಾಯಕ ಅವರು ಪ್ರತಿಭಟನೆ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಗೋಪಾಲಕೃಷ್ಣ ನಾಯಕ ಅವರು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. `ನಾನೇನು ಮಾಡಿಲ್ಲ. ನಂದೇನು ತಪ್ಪಿಲ್ಲ’ ಎಂಬರ್ಥದಲ್ಲಿ ಗೋಪಾಲಕೃಷ್ಣ ನಾಯಕ ಅವರು ಹೇಳಿಕೊಂಡಿದ್ದಾರೆ.
`ತನ್ನ ಮೇಲೆ ಮಾರಣಾಂತಿಕ ದಾಳಿ ನಡೆದ ಕಾರಣ ಅದರ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿದ್ದೇನೆ. ಕಳೆದ ಮೂರು ದಿನಗಳಿಂದ ನಾನು ಚಿಕಿತ್ಸೆಪಡೆಯುತ್ತಿದ್ದು, ಅಂಕೋಲಾದ ವಂದಿಗೆಯಲ್ಲಿ ನಡೆದ ಗಲಾಟೆ ಬಗ್ಗೆ ನನಗೆ ಯಾವುದೇ ಮುನ್ಸೂಚನೆಯಿರಲಿಲ್ಲ. ಗಲಾಟೆ ನಡೆದ ನಂತರ ಆ ವಿಷಯ ಗೊತ್ತಾಗಿದ್ದು, ದೇವರ ಸಾಕ್ಷಿಯಾಗಿ ಈ ಬಗ್ಗೆ ಪ್ರಮಾಣ ಮಾಡಲು ಸಿದ್ಧ’ ಎಂದು ಗೋಪಾಲಕೃಷ್ಣ ನಾಯಕ ಅವರು ಹೇಳಿದ್ದಾರೆ.
`ನನ್ನ ಕೊಲೆ ಪ್ರಯತ್ನ ನಡೆದು ದಿನ ಕಳೆದರೂ ಆರೋಪಿಗಳ ಬಂಧನ ಆಗಿಲ್ಲ. ಹೀಗಾಗಿ ನಾಗರಾಜ ನಾಯಕ ಅವರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ಸೇರಿಸಿ ನಾನು ಪ್ರತಿಭಟಿಸಬೇಕಿತ್ತು. ಆದರೆ, ಪೊಲೀಸರ ಮೇಲೆ ನಂಬಿಕೆಯಿರುವುದರಿAದ ನಾನು ಪ್ರತಿಭಟನೆ ಮಾಡಿಲ್ಲ. ಅದಾಗಿಯೂ, ನನ್ನ ವಿರುದ್ಧ ಪ್ರತಿಭಟಿಸುತ್ತಿರುವ ನಾಗರಾಜ ನಾಯಕ ಅವರಿಗೆ ದೇವರ ಮುಂದೆ ಪ್ರಮಾಣ ಮಾಡಲಿ’ ಎಂದು ಸವಾಲು ಹಾಕಿದರು..
`ಈ ಗಲಾಟೆಗೆ ನಾನು ಕಾರಣನಲ್ಲ ಎಂದು ವಂದಿಗೆಯ ಮಹಾಮಾಯಿ ದೇವಸ್ಥಾನ ಹಾಗೂ ಹೊನ್ನಾರಿಕಾ ದೇವಸ್ಥಾನಕ್ಕೆ ಬಂದು ನಾನು ಪ್ರಸಾದ ಎತ್ತಿ ಹೇಳುವೆ. ನಾಗರಾಜ ನಾಯಕ ಅವರು ಅಲ್ಲಿಗೆ ಬಂದು ಈ ಘಟನೆಗೆ ನಾನೇ ಕಾರಣ ಎಂದು ಹೇಳಲಿ ನೋಡೋಣ’ ಎಂದು ಸವಾಲು ಹಾಕಿದರು. ` ಅನಗತ್ಯವಾಗಿ ನನ್ನ ವಿರುದ್ಧ ದೂರು ನೀಡಲಾಗುತ್ತಿದ್ದು, ನಾನು ಏನೂ ಎಂದು ನನ್ನನ್ನು ಅರಿತಿರುವ ಜನರಿಗೆ ಗೊತ್ತು’ ಎಂದು ಗೋಪಾಲಕೃಷ್ಣ ನಾಯಕ ಅವರು ಸಮರ್ಥಿಸಿಕೊಂಡರು.