ಅಂಕೋಲಾದ ವಂದಿಗೆಯಲ್ಲಿ ಯಕ್ಷಗಾನ ನಡೆಯುತ್ತಿದ್ದ ವೇಳೆ ಪುಂಡರು ಅಸಭ್ಯವಾಗಿ ವರ್ತಿಸಿದ್ದಾರೆ. ಇದನ್ನು ವಿರೋಧಿಸಿದ ನ್ಯಾಯವಾದಿ ನಾಗರಾಜ ನಾಯಕ ಹಾಗೂ ಅವರ ಬೆಂಬಲಿಗರಿಗೆ ಅನ್ಯಾಯವಾಗಿದೆ!
ಪುಂಡಾಟ ನಡೆಸಿದವರ ಮೇಲೆ ಪ್ರಕರಣ ದಾಖಲಿಸುವ ಬದಲು ಅದನ್ನು ಪ್ರಶ್ನಿಸಿದವರ ವಿರುದ್ಧ ಪ್ರಕರಣ ದಾಖಲಿಸುವ ಕ್ರಮ ಖಂಡಿಸಿ ನಾಗರಾಜ ನಾಯಕ ಅವರು ದಿಢೀರ್ ಆಗಿ ಧರಣಿ ಶುರು ಮಾಡಿದ್ದಾರೆ. ಪೊಲೀಸ್ ಠಾಣೆ ಹಾಗೂ ತಹಶೀಲ್ದಾರ್ ಕಚೇರಿ ಎದುರು ಭಾಗದಲ್ಲಿ ನಾಗರಾಜ ನಾಯಕ ಅವರು ಧರಣಿ ನಡೆಸುತ್ತಿದ್ದು, ಗೃಹ ಸಚಿವ ಜಿ ಪರಮೇಶ್ವರ್ ಅವರು ಸ್ಥಳಕ್ಕೆ ಬರುವವರೆಗೂ ಧರಣಿ ಮುಂದುವರೆಸುವುದಾಗಿ ಅವರು ಘೋಷಿಸಿದ್ದಾರೆ. ಗೃಹ ಸಚಿವ ಜಿ ಪರಮೇಶ್ವರ್ ಅವರ ಆಪ್ತರಾಗಿರುವ ಅಂಕೋಲಾದ ಗೋಪಾಲಕೃಷ್ಣ ನಾಯಕ ಅವರ ಬೆಂಬಲಿಗರು ನೀಡಿದ ದೂರಿನ ಅನ್ವಯ ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು ಎಂದು ನಾಗರಾಜ ನಾಯಕ ಅವರು ಆಗ್ರಹಿಸಿದ್ದಾರೆ.
ನಾಗರಾಜ ನಾಯಕ ಅವರು ನಡೆಸುತ್ತಿರುವ ಧರಣಿಗೆ ವಂದಿಗೆ ಗ್ರಾಮದ ಜನರು ಬೆಂಬಲ ನೀಡಿದ್ದಾರೆ. `ಯಕ್ಷಗಾನ ಕಾರ್ಯಕ್ರಮ ಕೆಡಿಸಲು ಆಗಮಿಸಿದ್ದವರ ವಿರುದ್ಧ ಮೊದಲು ಕ್ರಮವಾಗಬೇಕು’ ಎಂದು ಆ ಭಾಗದವರು ಆಗ್ರಹಿಸಿದ್ದಾರೆ. `ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದವರ ವಿರುದ್ಧ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿಲ್ಲ. ಆದರೆ, ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದನ್ನು ವಿರೋಧಿಸಿದ ಕಾರಣ ತಕ್ಷಣ ಪ್ರಕರಣ ದಾಖಲಿಸಲಾಗಿದೆ. ಅಂಕೋಲಾ ಪೊಲೀಸ್ ಠಾಣೆ ಗೋಪಲಕೃಷ್ಣ ನಾಯಕ ಅವರ ಹಿಡಿತದಲ್ಲಿದ್ದು, ಅವರು ಹೇಳಿದ ಹಾಗೇ ಪೊಲೀಸರು ವರ್ತಿಸುತ್ತಿದ್ದಾರೆ’ ಎಂದು ನಾಗರಾಜ ನಾಯಕ ಅವರು ಆಕ್ರೋಶವ್ಯಕ್ತಪಡಿಸಿದ್ದಾರೆ.
ಅಂಕೋಲಾ ಪೊಲೀಸರ ವಿರುದ್ಧವೂ ನಾಗರಾಜ ನಾಯಕ ಅವರು ಕಿಡಿಕಾರಿದ್ದಾರೆ. `ಪೊಲೀಸರು ಅಮಾಯಕರ ವಿರುದ್ಧ ಕೇಸು ದಾಖಲಿಸುತ್ತಿದ್ದಾರೆ. ಅದರಿಂದ ಶಾಂತಿಯಿAದ ಕೂಡಿದ ಊರಿನಲ್ಲಿ ಅಶಾಂತಿ ಶುರುವಾಗಿದೆ’ ಎಂದು ನಾಗರಾಜ ನಾಯಕ ಅವರು ಹೇಳಿದ್ದಾರೆ.