ಉತ್ತರ ಕನ್ನಡ ಜಿಲ್ಲೆಯಲ್ಲಿನ ಜಲಕ್ರೀಡೆಗಳನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಸಮುದ್ರದ ನೀರಿಗೆ ಇಳಿಯದಂತೆ ಪೊಲೀಸರು ಅರಿವು ಮೂಡಿಸುತ್ತಿದ್ದಾರೆ. ಈ ಬೆನ್ನಲ್ಲೆ ಜಲಕ್ರೀಡೆ ನಿಷೇಧದ ಆದೇಶವನ್ನು ಹಿಂಪಡೆಯಲಾಗಿದೆ!
ಉತ್ತರ ಕನ್ನಡದ ಜಿಲ್ಲಾಡಳಿತದ ಅಡಿ ರಿವರ್ ರಾಫ್ಟಿಂಗ್ ಮತ್ತು ಜಲಸಾಹಸ ಕ್ರೀಡೆ ನಿರ್ವಹಣೆ ಮತ್ತು ಮೇಲುಸ್ತುವಾರಿ ಎಂಬ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದು, ವಿವಿಧ ಇಲಾಖೆ ಅಧಿಕಾರಿಗಳು ಸದಸ್ಯರಾಗಿದ್ದಾರೆ. ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು ಸಮಿತಿಯ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಮಳೆ ನೋಡಿದ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಮಂಗಲಗೌರಿ ಭಟ್ಟ ಅವರು ಮೇ 18ರಂದು ಜಲಕ್ರೀಡೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು. ಜೊತೆಗೆ ನದಿ ನೀರಿನಲ್ಲಿ ನಡೆಯುವ ಪ್ರೀ ವೆಡ್ಡಿಂಗ್ ಶೂಟ್’ನ ಸೆಟ್ ಅಳವಡಿಕೆಗೂ ನಿರ್ಬಂಧ ಹೇರಿದ್ದರು.
ಮಳೆಗಾಲಕ್ಕೂ ಮುನ್ನವೇ ಈ ಬಗ್ಗೆ ಆದೇಶಿಸಿದ ಕಾರಣ ಆಕ್ಷೇಪವ್ಯಕ್ತವಾಗಿದ್ದು, ಈ ಬಗ್ಗೆ ಮಾಧ್ಯಮ ವರದಿ ಪ್ರಸಾರದ ಹಿನ್ನಲೆ ಆ ಆದೇಶವನ್ನು ಅವರು ಹಿಂಪಡೆದಿದ್ದಾರೆ. ಮೇ 19ರ ಸಂಜೆಯಿAದ ಕಡಲತೀರದಲ್ಲಿ ಅಬ್ಬರ ಕಡಿಮೆಯಾದ ಹಿನ್ನಲೆ ಪ್ರವಾಸೋದ್ಯಮ ಉಪನಿರ್ದೇಶಕಿ ಮಂಗಲಗೌರಿ ಭಟ್ಟ ಅವರು ಮೇ 20ರಂದು ತಮ್ಮ ಆದೇಶ ಹಿಂಪಡೆದು ಮತ್ತೊಂದು ಆದೇಶ ಹೊರಡಿಸಿದ್ದಾರೆ.
ದೂರ ದೂರದ ಊರುಗಳಿಂದ ಬರುವ ಪ್ರವಾಸಿಗರಿಗೆ ನಿರಾಸೆ ಆಗದಂತೆ ತಡೆಯುವುದಕ್ಕಾಗಿ ಈ ಹಿಂದೆ ಹೊರಡಿಸಿದ್ದ ಆದೇಶ ಹಿಂಪಡೆದಿರುವುದಾಗಿ ತಿಳಿಸಲಾಗಿದೆ. ಜೊತೆಗೆ ಸುರಕ್ಷತಾ ಕ್ರಮಗಳೊಂದಿಗೆ ಈ ಹಿಂದೆ ನಡೆಸುತ್ತಿದ್ದ ಎಲ್ಲಾ ಜಲಕ್ರೀಡಾ ಚಟುವಟಿಕೆಯನ್ನು ಮುಂದುವರೆಸುವ ಬಗ್ಗೆ ಅವರು ಸೂಚಿಸಿದ್ದಾರೆ. ಅದಾಗಿಯೂ, ಸುರಕ್ಷತೆ ದೃಷ್ಠಿಯಿಂದ ಕಡಲಿಗೆ ಇಳಿಯುವ ಪ್ರವಾಸಿಗರಿಗೆ ಪೊಲೀಸರು ಮುನ್ನಚ್ಚರಿಕೆ ನೀಡುತ್ತಿದ್ದಾರೆ.