ಕಷ್ಟ ಕಾಲದಲ್ಲಿ ಸಾಲ ನೀಡಿದ ಸೊಸೈಟಿಗೆ ಅನ್ಯಾಯವಾಗುತ್ತಿರುವುದನ್ನು ಸಹಿಸದ ಶಿರಸಿ ನ್ಯಾಯಾಲಯ ಸಾಲಕ್ಕೆ ಜಾಮೀನು ನೀಡಿದ ವ್ಯಕ್ತಿಗೆ ದಂಡ ವಿಧಿಸಿದೆ.
ಶಿರಸಿ ನಗರದ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದಲ್ಲಿ ದೊಡ್ನಳ್ಳಿಯ ಗೋಪಾಲ ಕೇಶವ ಗಾಣಿಗ ಅವರು ಸಾಲಪಡೆದಿದ್ದರು. 2022ರಲ್ಲಿ ಅವರು 1 ಲಕ್ಷ ರೂ ಸಾಲಪಡೆದಿದ್ದು, ಆ ಸಾಲದ ಹಣವನ್ನು ಸಂಪೂರ್ಣವಾಗಿ ಅನುಭವಿಸಿದ್ದರು. ಈ ಸಾಲಕ್ಕೆ ಅವರ ಸಹೋದರ ಸಂತೋಷ ಕೇಶವ ಗಾಣಿಗ ಅವರು ಜಾಮೀನು ನೀಡಿದ್ದರು. ಕಷ್ಟಕಾಲದಲ್ಲಿ ಸಾಲದ ಹಣ ಬಳಸಿಕೊಂಡು ಅಭಿವೃದ್ಧಿಯಾದ ಗೋಪಾಲ ಗಾಣಿಗ ಅವರು ನಂತರ ಸಾಲ ಮರುಪಾವತಿಗೆ ಆಸಕ್ತಿವಹಿಸಲಿಲ್ಲ. ಜಾಮೀನುದಾರರಾಗಿದ್ದ ಸಂತೋಷ ಗಾಣಿಗ ಅವರು ಸಹ ಆ ಸಾಲ ತೀರಿಸಲು ಮುಂದೆ ಬರಲಿಲ್ಲ.
ಕೆಲ ಕಾಲ ಬಡ್ಡಿ ಪಾವತಿ ಮಾಡಿದ ಸಾಲಗಾರರು ನಂತರ ಅದನ್ನು ಮರೆತರು. ಸೊಸೈಟಿ ಸಿಬ್ಬಂದಿ ಸಾಕಷ್ಟು ಬಾರಿ ಓಡಾಡಿದರೂ ಅಸಲು ಹಾಗೂ ಬಡ್ಡಿ ವಸೂಲಿ ಆಗದ ಹಿನ್ನಲೆ ಈ ಬಗ್ಗೆ ನ್ಯಾಯಾಲಯದ ಮೊರೆ ಹೋದರು. ಸಾಲ ಮರು ಪಾವತಿಗೆ ನೀಡಿದ್ದ ಚೆಕ್ ಸಹ ಅಮಾನ್ಯವಾದ ಹಿನ್ನಲೆ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ಅವರು ನ್ಯಾಯಾಲಯದಲ್ಲಿ ದೂರು ದಾಖಲಿಸಿದರು. ಸಾಲ ಮರುಪಾವತಿಗೆ ಜಾಮೀನುದಾರರು ನೀಡಿದ ಚೆಕ್ ಅಮಾನ್ಯವಾದ ಬಗ್ಗೆ ನ್ಯಾಯಾಲಯಕ್ಕೆ ವಿವರಿಸಿದರು.
ಈ ಪ್ರಕರಣದ ಬಗ್ಗೆ ನ್ಯಾಯವಾದಿ ಪ್ರಶಾಂತ ನಾಯ್ಕ ಅವರು ವಾದ ಮಂಡಿಸಿದ್ದು, ಕಷ್ಟದ ಅವಧಿಯಲ್ಲಿ ನೆರವು ನೀಡಿದ ಸೊಸೈಟಿಗೆ ಸಾಲಗಾರರು ಮಾಡಿದ ಅನ್ಯಾಯದ ಬಗ್ಗೆ ವಿವರಿಸಿದರು. ವಾದ ಹಾಗೂ ಪ್ರತಿ ವಾದ ಆಲಿಸಿದ ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶೆ ಶಾರದಾದೇವಿ ಹಟ್ಟಿ ಅವರು ಸಾಲಕ್ಕೆ ಜಾಮೀನು ನೀಡಿದ ಸಂತೋಷ ಕೇಶವ ಗಾಣಿಗ ಅವರು 1 ಸಾವಿರ ರೂ ಕೋರ್ಟ ಫೀ ಹಾಗೂ 81912ರೂ ಸೊಸೈಟಿಗೆ ಪಾವತಿಸಬೇಕು ಎಂದು ಆದೇಶಿಸಿದರು. ಈ ಆದೇಶ ಪಾಲಿಸದೇ ಇದ್ದರೆ 3 ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆಯೂ ತೀರ್ಪು ಪ್ರಕಟಿಸಿದರು.