ಭಟ್ಕಳದ ಹೆಬಳೆ ಗ್ರಾಮದ ಸಿದ್ದಿವಿನಾಯಕ ದೇವಸ್ಥಾನ ಸಮೀಪ ಮಂಗವೊoದು ಓಡಾಡುತ್ತಿದ್ದು, ಕಮಲ ಎಂಬ ಹೆಸರಿನವರ ಮೇಲೆ ಈ ಕೋತಿ ದಾಳಿ ಮಾಡುತ್ತಿದೆ. ಈಗಾಗಲೇ ಕಮಲ ಎಂಬ ಮೂವರು ಮಹಿಳೆಯರಿಗೆ ಈ ಕೋತಿ ಕಚ್ಚಿದೆ!
ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಕೋತಿಯ ಉಪಟಳ ಹೆಚ್ಚಾಗಿದೆ. ಅದರಲ್ಲಿಯೂ, ಒಂಟಿಯಾಗಿರುವ ಕಪ್ಪು ಮೂತಿಯ ಕೋತಿ ಮನುಷ್ಯರನ್ನು ಹೆದರಿಸುತ್ತಿದೆ. ಮುಖ್ಯವಾಗಿ ಕಮಲ ಎಂಬ ಹೆಸರಿದ್ದವರ ಮೇಲೆ ಕೋತಿ ದಾಳಿ ಮಾಡಿರುವುದು ಇನ್ನೊಂದು ವಿಶೇಷ. ಅಲ್ಲಿಯೇ ಓಡಾಡುತ್ತಿದ್ದ `ಕೋಮಲಾ’ ಎಂಬಾತರಿಗೆ ಏನೂ ಮಾಡಿಲ್ಲ. ಆದರೆ, `ಕಮಲಾ’ ಎಂಬಾತರನ್ನು ಕಂಡರೆ ಮಾತ್ರ ಬಿಡುತ್ತಿಲ್ಲ!
ಭಟ್ಕಳ ಹೆಬಳೆ ಗ್ರಾಮದ ಶ್ರೀ ಸಿದ್ದಿವಿನಾಯಕ ದೇವಸ್ಥಾನ ಸಮೀಪ ಕಳೆದ ಕೆಲವು ದಿನಗಳಿಂದ ಮಂಗನ ಕಾಟ ಹೆಚ್ಚಾಗಿದೆ. ಈ ಬಗ್ಗೆ ಅಲ್ಲಿನ ಜನ ಅರಣ್ಯ ಇಲಾಖೆಗೂ ಮಾಹಿತಿ ನೀಡಿದ್ದಾರೆ. ಮಂಗ ಮನೆ ಮನೆಗೂ ನುಗ್ಗಿ ಸಾರ್ವಜನಿಕರನ್ನು ಹೆದರಿಸುತ್ತಿದೆ. ಹೀಗಾಗಿ ಮಹಿಳೆಯರು-ಮಕ್ಕಳು ಮನೆ ಬಾಗಿಲ ಬಳಿ ಬರಲು ಭಯಪಡುತ್ತಿದ್ದಾರೆ. ಮಂಗನನ್ನು ಹಿಡಿಯುವಂತೆ ಜನ ಗ್ರಾಮ ಪಂಚಾಯತಗೆ ಅರ್ಜಿ ಕೊಟ್ಟಿದ್ದಾರೆ. ಅರಣ್ಯಾಧಿಕಾರಿಗಳಿಗೆ ಸಹ ಮನವಿ ಮಾಡಿದ್ದಾರೆ. ಆದರೆ, ಆ ಮಂಗ ಮಾತ್ರ ಬಂಧನದ ಬಲೆಗೆ ಬೀಳುತ್ತಿಲ್ಲ.
`ಮಂಗನ ಹಿಡಿಯುವ ಪ್ರಯತ್ನ ನಡೆದಿದೆ. ಅರಣ್ಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಮಾಡಿದ್ದಾರೆ. ಅದು ಬೇರೆ ಮಂಗಗಳ ಗುಂಪಿನಲ್ಲಿ ಸೇರಿದ್ದರಿಂದ ಹಿಡಿಯಲು ಸಾಧ್ಯವಾಗಿಲ್ಲ. ಅದಾಗಿಯೂ, ಮಂಗನ ಹಿಡಿಯುವ ಕಾರ್ಯ ಮುಂದುವರೆದಿದೆ’ ಎಂದು ವಲಯ ಅರಣ್ಯಾಧಿಕಾರಿ ವಿಶ್ವನಾಥ ನಾಯ್ಕ ಅವರು ಹೇಳಿದ್ದಾರೆ.