FTTH ಇಂಟರ್‌ನೇಟ್ ಕೇಬಲ್ ಅಳವಡಿಸಿ ಸರ್ವೀಸ್ ಕೊಡುವ ಮೂಲಕ ಉತ್ತಮ ಆದಾಯಗಳಿಸುತ್ತಿದ್ದ ಸಿದ್ದಾಪುರದ ಬಾಲಚಂದ್ರ ಹೆಗಡೆ ಅವರು ಅತಿಯಾದ ಆಸೆಗೆ ಬಿದ್ದು 30 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ. 90 ಲಕ್ಷ ಲಾಭ ಮಾಡುವ ಕನಸು ಕಂಡು ಅವರು 30 ಲಕ್ಷ ರೂ ಹೂಡಿಕೆ ಮಾಡಿದ್ದು, ಹೂಡಿಕೆ ಮಾಡಿದ 30 ಲಕ್ಷ ರೂ ಹಣವೂ ಮೋಸಗಾರರ ಪಾಲಾಗಿದೆ.
ಸಿದ್ದಾಪುರದ ಹೆಗ್ಗನೂರು ಬಳಿಯ ಹರ್ತೇಬೈಲ್ ಸಮೀಪ ಬಾಲಚಂದ್ರ ಗಣಪತಿ ಹೆಗಡೆ ಅವರು ವಾಸವಾಗಿದ್ದಾರೆ. ಕೃಷಿ ಕೆಲಸದ ಜೊತೆ ಅವರು ಎಫ್‌ಟಿಟಿಎಚ್ ಸರ್ವೀಸ್ ಕೊಡುತ್ತ ಜೀವನ ನಡೆಸುತ್ತಿದ್ದಾರೆ. ಇಷ್ಟು ದಿನ ಸರಿಯಾಗಿಯೇ ಇದ್ದ ಬಾಲಚಂದ್ರ ಹೆಗಡೆ ಅವರಿಗೆ ಒಮ್ಮೆಲೆ ದಿಢೀರ್ ದುಡ್ಡು ಮಾಡುವ ಆಸೆ ಶುರುವಾಗಿದೆ. ಆ ಆಸೆ ದುರಾಸೆಯ ಸ್ವರೂಪಪಡೆದಿದ್ದು, ಪರಿಣಾಮ ಅವರು ವಂಚಕರ ಬಲೆಗೆ ಬಿದ್ದಿದ್ದಾರೆ.
ಪ್ರಭಾಷ ಮಿಶ್ರಾ ಸೆಬಿ ರಿಜಿಸ್ಟರು ಸ್ಟಾಕ್ ಅನಾಲಿಸ್ಟ್ ಅವರ ಅಧಿಕೃತ ಟೆಲಿಗ್ರಾಮಿನಿಂದ ಬಾಲಚಂದ್ರ ಹೆಗಡೆ ಅವರಿಗೆ ಮೆಸೆಜ್ ಒಂದು ಬಂದಿದ್ದು, ಅದನ್ನು ನಂಬಿದ ಅವರು ಅಲ್ಲಿ ಖಾತೆ ತೆರೆದಿದ್ದಾರೆ. ಶೇ 20ರ ಕಮಿಷನ್ ಕೊಟ್ಟು ಹೂಡಿಕೆ ವ್ಯವಹಾರ ಶುರು ಮಾಡಿದ್ದಾರೆ. ಶೇ 300ರಷ್ಟು ಹಣ ಡಬಲ್ ಆಗುವ ಕನಸು ಕಂಡ ಅವರು ದೀಪಕಕುಮಾರ ಹಾಗೂ ಇನ್ನತರ ಖಾತೆಗೆ ಹಂತ ಹಂತವಾಗಿ 30 ಲಕ್ಷ ರೂ ವರ್ಗಾಯಿಸಿದ್ದಾರೆ. ಆ ಹಣ 90 ರೂಪಾಯಿಯ ಲಾಭವನ್ನು ಕಾಣಿಸಿದೆ. ಕಂಪನಿಯ ಶೇ 20ರಷ್ಟು ಕಮಿಷನ್ ಮುರಿದುಕೊಂಡು ಆ ಹಣ ಹಿಂಪಡೆಯುವ ಪ್ರಯತ್ನ ಮಾಡಿದಾಗ ಮಾತ್ರ ಅದು ಸಾಧ್ಯವಾಗಿಲ್ಲ.
ಈ ಬಗ್ಗೆ ಬಾಲಚಂದ್ರ ಹೆಗಡೆ ಅವರು ಪ್ರಶ್ನಿಸಿದಾಗ ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದ ಕಾರಣ ಮತ್ತೆ 10 ಲಕ್ಷ ಪಾವತಿಸುವಂತೆ ಹೇಳಿದ್ದಾರೆ. ಆಗ, ಅವರಿಗೆ ತಾವು ಮೋಸ ಹೋದ ವಿಷಯ ಅರಿವಿಗೆ ಬಂದಿದ್ದು, ನ್ಯಾಯ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ. ಶ್ಯಾಮ್ ರಾಜನ್ ಅಡ್ಮಿನ್ ಹಾಗೂ ವೈದೇಹಿ ದೇಶಮುಖ್ ಅಸಿಸ್ಟೆಂಟ್ ಮ್ಯಾನೇಜರ್ ಎಂಬಾತರ ವಿರುದ್ಧ ಬಾಲಚಂದ್ರ ಹೆಗಡೆ ಅವರು ದೂರು ನೀಡಿದ್ದಾರೆ.