ಯಲ್ಲಾಪುರದಲ್ಲಿನ ಆಡಳಿತ ವ್ಯವಸ್ಥೆಯ ಲೋಪಗಳನ್ನು ಪ್ರಶ್ನಿಸಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಪ್ರತಿಭಟನೆಯಲ್ಲಿ ತೇಲಿ ಬಂದ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರಿಸುವ ಪ್ರಯತ್ನ ಮಾಡಿದ್ದಾರೆ. ಕೆಲ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗದ ಕಾರಣ ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದ್ದಾರೆ.
ಯಲ್ಲಾಪುರ ಪಟ್ಟಣದ ಹೆಬ್ಬಾರ್ ನಗರದಲ್ಲಿ ನಿರ್ಮಿಸಲಾದ ಜಿ+2 ಮನೆಗಳ ವಿತರಣೆ, ವನ್ಯಜೀವಿ ದಾಳಿಗೆ ಒಳಗಾದವರಿಗೆ ನೀಡಿದ ಪರಿಹಾರದಲ್ಲಿನ ತಾರತಮ್ಯ, ತಾಲೂಕು ಆಸ್ಪತ್ರೆಯಲ್ಲಿನ ವೈದ್ಯರ ಕೊರತೆ, ಮಳೆ ಮಾಪನ ಕೇಂದ್ರಗಳ ದುರಸ್ಥಿ ವಿಷಯವಾಗಿ ಬಿಜೆಪಿಗರು ಪ್ರತಿಭಟನೆಯಲ್ಲಿ ಪ್ರಶ್ನಿಸಿದ್ದಾರೆ. `ಮನೆ ವಿತರಣೆ ವಿಷಯದ ಕುರಿತು ತಾಲೂಕಾ ಆಡಳಿತ ಸಭೆ ಕಡೆಯಬೇಕು. ಶಾಸಕರ ಉಪಸ್ಥಿತಿಯಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಕೋಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳ ಜೊತೆ ಪಲಾನುಭವಿಗಳನ್ನು ಸಭೆಗೆ ಆಮಂತ್ರಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. `ನಿರ್ಮಿಸಲಾದ ಮನೆಗಳನ್ನು ಫಲಾನುಭವಿಗಳಿಗೆ ಯಾವಾಗ ಹಸ್ತಾಂತರಿಸಲಾಗುತ್ತದೆ? ಎಂಬ ಪ್ರಶ್ನೆಗೆ ಉತ್ತರಬೇಕು’ ಎಂದು ಪಟ್ಟುಹಿಡಿದರು. `ಕೋಳಗೇರಿ ಅಭಿವೃದ್ಧಿ ಮಂಡಳಿ ಹೆಸರಿನಲ್ಲಿ ಸೂಚಿಸಿದ್ದಕ್ಕಿಂತ ಹೆಚ್ಚುವರಿ ಹಣ ವಸೂಲಾತಿ ಮಾಡಲಾಗುತ್ತಿದೆ’ ಎಂದು ದೂರಿದರು.
ಇದಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೇಶವ ಚೌಗಲೆ ಪ್ರತಿಕ್ರಿಯಿಸಿ `ಕೊಳಗೇರಿ ಅಭಿವೃದ್ಧಿ ಮಂಡಳಿ ಪಟ್ಟಣ ಪಂಚಾಯಿತಿಗೆ ಮನೆಗಳನ್ನು ಹಸ್ತಾಂತರಿಸಿಲ್ಲ. ಹಸ್ತಾಂತರ ಆದ ತಕ್ಷಣ ನಿಯಮಾನುಸಾರ ಫಲಾನುಭವಿಗಳಿಗೆ ಒದಗಿಸಲಾಗುತ್ತದೆ’ ಎಂದರು. ಈ ಉತ್ತರದಿಂದ ಪ್ರತಿಭಟನಾಕಾರರು ಸಮಾಧಾನಗೊಳ್ಳಲಿಲ್ಲ. `ಯಲ್ಲಾಪುರ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರು ಇಲ್ಲದೇ ಸಮಸ್ಯೆ ಉಂಟಾಗಿದೆ’ ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದರು. ತಾಲೂಕು ವೈದ್ಯಾಧಿಕಾರಿ ಡಾ ನರೇಂದ್ರ ಪವಾರ ಅವರು ಇದಕ್ಕೆ ಪ್ರತಿಕ್ರಿಯಿಸಿದ್ದು, `ತಾಲೂಕು ಆಸ್ಪತ್ರೆಗೆ ಈಗಾಗಲೇ ಹಿಂದಿನ ಪ್ರಸೂತಿ ತಜ್ಞರನ್ನು ನಿಯೋಜಿಸಲಾಗಿದೆ. ಅವರು ವಾರದಲ್ಲಿ ಮೂರು ದಿನ ಇಲ್ಲಿಯೇ ಸೇವೆ ಸಲ್ಲಿಸಲಿದ್ದಾರೆ’ ಎಂಬ ಮಾಹಿತಿ ನೀಡಿದರು. ಮಳೆ ಮಾಪನ ಕೇಂದ್ರಗಳ ದುಸ್ಥಿತಿಯ ಬಗ್ಗೆ ಪ್ರತಿಭಟನಾಕಾರರು ಗಮನಸೆಳೆದರು. `ಮಳೆ ಮಾಪನ ಕೇಂದ್ರಗಳು ಸರಿಯಿಲ್ಲದ ಕಾರಣ ರೈತರಿಗೆ ಅನ್ಯಾಯವಾಗುತ್ತಿದೆ’ ಎಂದು ವಿವರಿಸಿದರು. ಕರಡಿ ದಾಳಿಯಿಂದ ಅಂಗವಿಕಲರಾದವರಿಗೆ ನೀಡಿದ ಪರಿಹಾರದಲ್ಲಿ ತಾರತಮ್ಯವಾಗಿದೆ. ಶಾಸಕರ ಆಪ್ತರಿಗೆ 10 ಲಕ್ಷ ರೂ ಪರಿಹಾರ ಹಾಗೂ 4 ಸಾವಿರ ರೂ ಮಾಸಾಶನ ನೀಡಲಾಗುತ್ತಿದೆ. ಆದರೆ, ಬಡವರಿಗೆ 5 ಲಕ್ಷ ರೂ ಪರಿಹಾರ ಮಾತ್ರ ನೀಡಲಾಗಿದೆ’ ಎಂದು ದೂರಿದರು.
ತಹಶೀಲ್ದಾರ ಮಧುಸೂದನ ಆರ್ ಕುಲಕರ್ಣಿ ಅವು ಮಾತನಾಡಿ `ಈ ಎಲ್ಲ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳಿಗೆ ವಿವರವಾದ ವರದಿ ಸಲ್ಲಿಸಲಾಗುತ್ತದೆ. ಮಳೆ ಮಾಪನದ ರಿಪೇರಿಗೆ ಈಗಾಗಲೇ ಟೆಂಡರ್ ಆಗಿದ್ದು ಜೂನ್ ಅಂತ್ಯದ ವೇಳೆಗೆ ಎಲ್ಲ ಮಳೆ ಮಾಪನ ಯಂತ್ರಗಳು ರಿಪೇರಿ ಆಗಲಿವೆ’ ಎಂಬ ಭರವಸೆ ನೀಡಿದರು. ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಪ್ರತಿಭಟನೆ ಮುಂದಾಳತ್ವವಹಿಸಿದ್ದು, ಪ್ರಮುಖರಾದ ಎಲ್ ಟಿ ಪಾಟೀಲ, ಉಮೇಶ ಭಾಗೃತ, ಶ್ಯಾಮಿಲಿ ಪಾಟಣಕರ, ಸೋಮೇಶ್ವರ ನಾಯ್ಕ, ರಮೇಶ ನಾಯ್ಕ ಅವರು ಪ್ರತಿಭಟನೆಯಲ್ಲಿ ಮಾತನಾಡಿದರು. ಪ್ರಮುಖರಾದ ನಟರಾಜ ಗೌಡರ್, ರಾಘವೇಂದ್ರ ಭಟ್ಟ, ರಾಮು ನಾಯ್ಕ, ರವಿ ಕೈಟ್ಕರ ಇತರರು ಪ್ರತಿಭಟನೆಯಲ್ಲಿದ್ದರು.