ಯಲ್ಲಾಪುರದ ಕಾಳಮ್ಮ ನಗರದ ಆಶ್ರಯ ಕಾಲೋನಿಯಲ್ಲಿ ವಾಸಿಸುವವರಿಗೆ ಸರಿಯಾದ ಆಶ್ರಯ ಸಿಗುತ್ತಿಲ್ಲ. ಆ ಪ್ರದೇಶ ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ದೂರಿದರೂ ಯಾವ ಪ್ರಯೋಜನವೂ ಆಗಿಲ್ಲ.
ಯಲ್ಲಾಪುರ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಸಹಚರರು ಈ ದಿನ ಆಶ್ರಯ ಕಾಲೋನಿಗೆ ಭೇಟಿ ನೀಡಿದ್ದಾರೆ. ಅಲ್ಲಿನ ಸಮಸ್ಯೆಗಳ ಬಗ್ಗೆ ಜನರ ಜೊತೆ ಚರ್ಚೆ ನಡೆಸಿದ್ದಾರೆ. ಅಲ್ಲಿನ ಸಮಸ್ಯೆ ಹಾಗೂ ಜನ ಅನುಭವಿಸುತ್ತಿರುವ ನೋವಿನ ಬಗ್ಗೆ ವಿವಿಧ ಇಲಾಖೆಯವರ ಗಮನಕ್ಕೆ ತರುವ ಭರವಸೆ ನೀಡಿದ್ದಾರೆ. `ಈಗಾಗಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಕನಿಷ್ಟ ಸೌಕರ್ಯ ಒದಗಿಸುವ ಕೆಲಸ ಆಗಿಲ್ಲ’ ಎಂದು ಸಹ ಬಿಜೆಪಿಗರು ಅಸಮಧಾನವ್ಯಕ್ತಪಡಿಸಿದ್ದಾರೆ.
`ಯಲ್ಲಾಪುರದಲ್ಲಿ ರಾಜ ಕಾಲುವೆ ನಿರ್ಮಾಣ ಕೆಲಸ ಅರೆಬರೆಯಾಗಿದೆ. ಆಶ್ರಯ ಕಾಲೋನಿ ಬಳಿ ರಾಜಕಾಲುವೆ ನಿರ್ಮಾಣ ಸಂಪೂರ್ಣ ಆಗದ ಕಾರಣ ಅಲ್ಲಿನ ಮನೆಗಳು ಬೀಳುವ ಹಂತ ತಲುಪಿದೆ. ಆಶ್ರಯ ಕಾಲೋನಿ ಹಿಂಭಾಗದಲ್ಲಿ ದೊಡ್ಡದಾಗಿ ಹುಲ್ಲಿನ ಪೊದರೆ ಬೆಳೆದಿದ್ದು, ಅಲ್ಲಿರುವ ಹಂದಿ-ನಾಯಿ ಕಾಟಕ್ಕೆ ಜನ ತತ್ತರಿಸಿದ್ದಾರೆ. ಬಡವರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ’ ಎಂದು ಪ್ರಸಾದ ಹೆಗಡೆ ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
`ಇಲ್ಲಿನ ಸಮಸ್ಯೆಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಅಗತ್ಯ ಮುನ್ನಚ್ಚರಿಕಾ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ನಡೆಯುವ ಅನಾಹುತಕ್ಕೆ ಅಧಿಕಾರಿಗಳೇ ಜವಾಬ್ದಾರರಾಗಲಿದ್ದಾರೆ’ ಎಂದು ಬಿಜೆಪಿ ಪ್ರಮುಖರಾದ ಗಣೇಶ ಪಾಟಣಕರ, ರವಿ ದೇವಡಿಗ, ತುಳಸಿದಾಸ ನಾಯ್ಕ ಇತರರು ಎಚ್ಚರಿಸಿದ್ದಾರೆ.