ಕಾರವಾರದ ವಿವೇಕಾನಂದ ಶಾಲೆ ಮೈದಾನದಲ್ಲಿ ನಡೆದ ಕ್ರಿಕೆಟ್ ಆಟ ಹೊಡೆದಾಟಕ್ಕೆ ಕಾರಣವಾಗಿದೆ. ಕ್ರಿಕೆಟ್ ಆಡುವಾಗ ತಪ್ಪು ನಿರ್ಣಯ ಕೊಟ್ಟ ಕಾರಣ ಸಾಯಿರಾಜ್ ನಾಯರ್ ಅವರಿಗೆ ವಿಶಾಲ ಸ್ವಾಮಿ, ಅಕ್ಷಯ ನಾಯ್ಕ ಹಾಗೂ ಸಂದೇಶ ಕಟ್ಟಾ ಸೇರಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಮಾವನ ಮಗನಿಗೆ ಆದ ಅನ್ಯಾಯ ಸರಿಪಡಿಸುವುದಕ್ಕಾಗಿ ಸರ್ವೇಶ್ ಪೆಡ್ನೇಕರ್ ಅವರು ಕೋರ್ಟು-ಕೇಸು ಎಂದು ಅಲೆದಾಟ ಶುರು ಮಾಡಿದ್ದಾರೆ.
ಕಾರವಾರದ ಪಂಚರಿಷಿವಾಡದ ವಿವೇಕಾನಂದ ಶಾಲೆ ಮೈದಾನದಲ್ಲಿ ಒಂದು ತಿಂಗಳ ಹಿಂದೆ ಕ್ರಿಕೆಟ್ ಆಟ ಆಯೋಜನೆಯಾಗಿತ್ತು. ಅದೇ ಭಾಗದ ಸಾಯಿರಾಜ್ ಪ್ರವೀಣ ನಾಯರ್ ಹಾಗೂ ಸುತ್ತಲಿನ ಹುಡುಗರೆಲ್ಲರೂ ಸೇರಿ ಖುಷಿಯಿಂದ ಕ್ರಿಕೆಟ್ ಆಡುತ್ತಿದ್ದರು. ಖಾಪ್ರಿ ದೇವಾಲಯ ಬಳಿಯ ವಿಶಾಲ ಸ್ವಾಮಿ, ಅಕ್ಷಯ ಪ್ರಭಾಕರ ನಾಯ್ಕ, ಸಂದೇಶ ಮಾರುತಿ ಕಟ್ಟಾ ಅವರು ಈ ಕ್ರಿಕೆಟ್ ಆಟದಲ್ಲಿ ಭಾಗಿಯಾಗಿದ್ದರು. ಕ್ರಿಕೆಟ್ ಆಟದ ನಿರ್ಣಾಯಕ ಹೊಣೆ ಹೊತ್ತ ಸಾಯಿರಾಜ್ ನಾಯರ್ ಅವರು ಈ ವೇಳೆ ತಮ್ಮ ತೀರ್ಪು ನೀಡಿದ್ದು, ಅದನ್ನು ನೋಡಿ ವಿಶಾಲ ಸ್ವಾಮಿ, ಅಕ್ಷಯ ನಾಯ್ಕ ಹಾಗೂ ಸಂದೇಶ ಕಟ್ಟಾ ಸಿಡಿಮಿಡಿಕೊಂಡರು. ತಪ್ಪು ತೀರ್ಪು ನೀಡಿದ ಎಂಬ ಕಾರಣಕ್ಕೆ ಸಾಯಿರಾಜ್ ನಾಯರ್ ಅವರ ಮೇಲೆ ಕೈ ಮಾಡಿದರು.
ಕೆನ್ನೆ, ತಲೆ, ಕುತ್ತಿಗೆ, ಬೆನ್ನಿಗೆ ಗಾಯಗೊಂಡ ಸಾಯಿರಾಜ್ ನಾಯರ್ ಅವರು ಆಸ್ಪತ್ರೆ ಸೇರಿದರು. ಮಾವನ ಮಗನ ಮೇಲೆ ದಾಳಿಯಾದ ವಿಷಯ ಕೇಳಿ ಸರ್ವೇಶ್ ಪೆಡ್ನೇಕರ್ ಅವರು ಅಲ್ಲಿ ಓಡೋಡಿ ಬಂದರು. ಮಾವನ ಮಗನಿಗೆ ಚಿಕಿತ್ಸೆ ಕೊಡಿಸಿದ ಸರ್ವೇಶ್ ಪೆಡ್ನೇಕರ್ ಅವರು ಪೊಲೀಸರಿಗೆ ಫೋನ್ ಮಾಡಿ, ಆಸ್ಪತ್ರೆಯಿಂದಲೇ ದೂರು ನೀಡಿದರು. ಒಂದು ತಿಂಗಳಾದರೂ ಪೊಲೀಸ್ ಪ್ರಕರಣ ದಾಖಲಾಗದ ಕಾರಣ ಸರ್ವೇಶ್ ಅವರು ಕೋರ್ಟಿನ ಮೊರೆ ಹೋದರು. ಕೋರ್ಟಿನ ಸೂಚನೆ ಮೇರೆಗೆ ಪೊಲೀಸರು ವಿಶಾಲ ಸ್ವಾಮಿ, ಅಕ್ಷಯ ಪ್ರಭಾಕರ ನಾಯ್ಕ, ಸಂದೇಶ ಮಾರುತಿ ಕಟ್ಟಾ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಿದ್ದಾರೆ.