ಕಾರವಾರದ ನದಿವಾಡದಲ್ಲಿ ನಡೆದ ಗಲಾಟೆಯಲ್ಲಿ ಚಾಕು ಚುಚ್ಚಿಸಿಕೊಂಡಿದ್ದ ರೋಷನ್ ಹುಲಸ್ವಾರ್ ಅವರು ಸಾವನಪ್ಪಿದ್ದಾರೆ. ಮಂಗಳೂರಿನ ಎ ಜೆ ಆಸ್ಪತ್ರೆ ಹಾಗೂ ವೆನ್‌ಲಾಕ್ ಆಸ್ಪತ್ರೆಯ ವೈದ್ಯರಿಂದಲೂ ರೋಷನ್ ಹರಿಕಂತ್ರ ಅವರನ್ನು ಬದುಕಿಸಲು ಆಗಲಿಲ್ಲ.
ಕಾರವಾರದ ನದಿವಾಡದ ಸಂತೋಷಿಮಾತಾ ದೇಗುಲ ಬಳಿ ಜೂನ್ 7ರಂದು ಗಲಾಟೆ ನಡೆದಿತ್ತು. ಆ ದಿನ ರಾತ್ರಿ 9.30ರ ಸುಮಾರಿಗೆ ಅಲ್ಲಿನ ಆಟದ ಮೈದಾನದಲ್ಲಿ ಅಂಬೇಡ್ಕರ್ ಕಾಲೋನಿಯ ಸಂಜಯ ಸತೀಶ ಮಾಂಗ್ರೇಕರ್ ಅವರು ರೋಷನ್ ಪ್ರದೀಪ ಹುಲಸ್ವಾರ್ ಅವರ ಮೇಲೆ ದಾಳಿ ಮಾಡಿದ್ದರು. ವೆಲ್ಡಿಂಗ್ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ರೋಷನ್ ಹರಿಕಂತ್ರ ಅವರು ಚಾಕುವಿನ ದಾಳಿಗೆ ಸಿಲುಕಿ ತತ್ತರಿಸಿದ್ದರು. ಸೊಂಟ ಹಾಗೂ ಹೊಟ್ಟೆಗೆ ಚಾಕು ಚಿಚ್ಚಿದ ಪರಿಣಾಮ ರೋಷನ್ ಹುಲಸ್ವಾರ್ ಅವರು ಕುಸಿದು ಬಿದ್ದಿದ್ದರು.
ಅದಾದ ನಂತರ ಪೊಲೀಸರು ಆರೋಪಿ ಸಂಜಯ್ ಮಾಂಗ್ರೇಕರ್ ಅವರನ್ನು ಬಂಧಿಸಿದ್ದರು. ರೋಷನ್ ಹುಲಸ್ವಾರ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಎಜೆ ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿನ ವೈದ್ಯರು ರೋಷನ್ ಹುಲಸ್ವಾರ್ ಅವರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದರು. ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ವೆನ್‌ಲಾಕ್ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲಾಯಿತು. ಆದರೆ, ಅಲ್ಲಿಯೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ.
ಹಳೇ ದ್ವೇಷದ ಹಿನ್ನೆಲೆ ನಡೆದ ಗಲಾಟೆ ಪರಿಣಾಮ ಜೂನ್ 21ರಂದು ರೋಷನ್ ಹುಲಸ್ವಾರ್ ಅವರು ಸಾವನಪ್ಪಿದರು. 21ನೇ ವಯಸ್ಸಿನಲ್ಲಿಯೇ ಅವರು ಬಾರದ ಲೋಕಕ್ಕೆ ತೆರಳಿದ ಬಗ್ಗೆ ಕುಟುಂಬದವರು ಆಘಾತಕ್ಕೆ ಒಳಗಾದರು. ಚಾಕು ಚುಚ್ಚಿದ ಆರೋಪಿ ಸಂಜಯ್ ಮಾಂಗ್ರೇಕರ್ ಅವರಿಗೂ ಈಗಿನ್ನು 20 ವರ್ಷವಾಗಿದ್ದು, ಅವರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.