ಗೋವಾದಿಂದ ಕರ್ನಾಟಕ ಪ್ರವೇಶಿಸಿದ ಸರಾಯಿ ದಾವಣೆಗೆರೆ ಕಡೆ ಹೊರಟಿದ್ದು, ಬನವಾಸಿ ಪೊಲೀಸರು ಈ ಅಕ್ರಮ ಸಾಗಾಟ ತಡೆದಿದ್ದಾರೆ. ಸರಾಯಿ ಸಾಗಾಟಗಾರರಿಬ್ಬರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಣಿವೆ ಬಿಳಚಿ ಗ್ರಾಮದ ಅರುಣ್ ರಾಮಚಂದ್ರ ರಾವ್ (35) ಹಾಗೂ ರಾಘವೇಂದ್ರ ಫಕ್ಕಿರಪ್ಪ (43) ಅವರು ಗೋವಾಗೆ ಹೋಗಿದ್ದರು. ಅಲ್ಲಿಂದ ಊರಿಗೆ ಮರಳುವಾಗ ತಮ್ಮ ನ್ಯಾನ್ಯೋ ಕಾರಿನ ತುಂಬ ಸರಾಯಿ ತುಂಬಿಕೊAಡಿದ್ದರು. ಅಗ್ಗದ ಬೆಲೆಗೆ ಸಿಗುವ ಸರಾಯಿಯನ್ನು ದುಬಾರಿ ದರಕ್ಕೆ ಮಾರಾಟ ಮಾಡಿ ಶ್ರೀಮಂತರಾಗುವ ಕನಸು ಕಂಡಿದ್ದರು. ಜೂನ್ 19ರ ಮಧ್ಯಾಹ್ನ ಗೋವಾದಿಂದ ಹೊರಟ ಅವರು ಬನವಾಸಿ-ಶಿರಸಿ ರಸ್ತೆಯ ಕದಂಬ ಸರ್ಕಲ್ ಸಮೀಪ ಸಿಕ್ಕಿಬಿದ್ದರು.
ಈ ವೇಳೆ ಕಾರಿನೊಳಗೆ ಮೂರು ಪ್ಲಾಸ್ಟಿಕ್ ಚೀಲಗಳಲ್ಲಿ ಇರಿಸಲಾಗಿದ್ದ ಐದು ರಟ್ಟಿನ ಬಾಕ್ಸುಗಳನ್ನು ತೆರೆದ ಪೊಲೀಸರಿಗೆ 60 ಸರಾಯಿ ಬಾಟಲಿಗಳು ಕಾಣಿಸಿದವು. 22ಸಾವಿರ ರೂ ಮೌಲ್ಯದ ಮದ್ಯದ ಬಾಟಲಿಗಳನ್ನು ಪೊಲೀಸರು ವಶಕ್ಕೆಪಡೆದರು. ಮನೆಯ ಕಾರ್ಯಕ್ರಮಕ್ಕಾಗಿ ಮದ್ಯವನ್ನು ಸಾಗಿಸುತ್ತಿರುವುದಾಗಿ ಆರೋಪಿತರು ಹೇಳಿದರೂ ಪೊಲೀಸರು ಅದನ್ನು ಬಿಟ್ಟುಕೊಡಲಿಲ್ಲ. ರಾಜ್ಯದ ತೆರಿಗೆ ತಪ್ಪಿಸಿ ಸರಾಯಿ ಸಾಗಿಸಿದ ಕಾರಣ ಪೊಲೀಸ್ ಉಪನಿರೀಕ್ಷಕ ರವೀಂದ್ರ ಬಿರಾದಾರ ಅವರು ಕಠಿಣ ಕ್ರಮ ಜರುಗಿಸಿದರು.