ಹಳಿಯಾಳ ಪೊಲೀಸ್ ಠಾಣೆಗೆ ನಿರಂತರವಾಗಿ ಬಾಲ್ ಪೆನ್ ಕೊಡಿಸುತ್ತಿದ್ದ ಮಂಜುನಾಥ ಕೋಳಿಪುಚ್ಚ ಅವರನ್ನು ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಊರು ಬಿಟ್ಟು ಓಡಿಸಿದ್ದಾರೆ. ಅಂಕಿ-ಸoಖ್ಯೆಗಳ ಆಟದ ರೂವಾರಿಯಾಗಿದ್ದ ಮಂಜುನಾಥ ಕೋಳಿಪುಚ್ಚ ಅವರು ಐದು ಪ್ರಕರಣದಲ್ಲಿ ಶಿಕ್ಷೆಯಾದರೂ ಕಾನೂನುಬಾಹಿರ ಕ್ರೀಡೆ ನಿಲ್ಲಿಸದ ಕಾರಣ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಾರೆ. ಮಂಜುನಾಥ ಕೋಳಿಪುಚ್ಚ ಅವರನ್ನು ಪೊಲೀಸರೇ ಹಿಡಿದು ಹಾಸನಕ್ಕೆ ಕರೆದೊಯ್ದು ಬಿಟ್ಟಿದ್ದಾರೆ.
ಹಳಿಯಾಳದ ಭಜಂತ್ರಿಗಲ್ಲಿಯ ಮಂಜುನಾಥ ಹನುಮಂತ ಕೋಳಿಪುಚ್ಚ ಅವರು ವಾಸವಾಗಿದ್ದರು. ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಅವರು 5 ಪ್ರಕರಣದಲ್ಲಿ ಶಿಕ್ಷೆಯನ್ನು ಅನುಭವಿಸಿದ್ದರು. ಮತ್ತೆ ಐದು ಪ್ರಕರಣದಲ್ಲಿ ಅವರ ವಿರುದ್ಧ ವಿಚಾರಣೆ ನಡೆದಿತ್ತು. ಮುಖ್ಯವಾಗಿ ಹಳಿಯಾಳದಲ್ಲಿ ಅವರು ಮಟ್ಕಾ ಬುಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ವಿವಿಧ ಅಂಗಡಿಕಾರರು, ಕೂಲಿ ಕಾರ್ಮಿಕರಿಗೆ ಕಮಿಷನ್ ಆಸೆ ತೋರಿಸಿ ಅವರಿಂದ ಕಾನೂನುಬಾಹಿರ ಕ್ರೀಡೆ ಆಡಿಸುತ್ತಿದ್ದರು. ಪೊಲೀಸರು ಸಾಕಷ್ಟು ಬಾರಿ ಮಂಜುನಾಥ ಕೋಳಿಪುಚ್ಚ ಅವರನ್ನು ಠಾಣೆಗೆ ಕರೆಯಿಸಿದ್ದರು. ಕೇಸು ದಾಖಲಿಸಿದ್ದರು. ಎಚ್ಚರಿಕೆಯನ್ನು ಸಹ ನೀಡಿದ್ದರು. ಆದರೆ, ಅದಕ್ಕೆ ಯಾವುದಕ್ಕೂ ಮಂಜುನಾಥ ಕೋಳಿಪುಚ್ಚ ಅವರು ತಲೆಭಾಗಿರಲಿಲ್ಲ. ನ್ಯಾಯಾಲಯ ನೀಡಿದ ಶಿಕ್ಷೆಯನ್ನು ಅನುಭವಿಸಿದ ಅವರು ನಂತರವೂ ಮಟ್ಕಾ ಆಡುವಂತೆ ಜನರನ್ನು ಪ್ರೇರೇಪಿಸುತ್ತಲೇ ಇದ್ದರು.
ಮಂಜುನಾಥ ಕೋಳಿಪುಚ್ಚ ಅವರ ಕಾನೂನುಬಾಹಿರ ಚಟುವಟಿಕೆ ನಿಲ್ಲಿಸುವುದಕ್ಕಾಗಿ ಪೊಲೀಸರು ರೌಡಿ ಶೀಟರ್ ಹಾಳೆಯಲ್ಲಿ ಹೆಸರು ದಾಖಲಿಸಿದ್ದರು. ಅದಾಗಿಯೂ, ಅಂಕಿ-ಸAಖ್ಯೆಗಳ ಆಟ ನಿಂತಿರಲಿಲ್ಲ. ಮಂಜುನಾಥ ಕೋಳಿಪುಚ್ಚ ಅವರಿಂದ ಕಾನೂನು ಸುವ್ಯವಸ್ಥೆಗೆ ಅಡ್ಡಿ ಆಗುವ ಹಿನ್ನಲೆ ಹಳಿಯಾಳ ಪೊಲೀಸರು ಗಡಿಪಾರಿಗೆ ಕೋರಿ ಶಿಫಾರಸ್ಸು ಮಾಡಿದ್ದರು. ಆ ಶಿಫಾರಸ್ಸು ಆಧಾರದಲ್ಲಿ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ವಿಚಾರಣೆ ನಡೆಸಿದರು. ಸದ್ಯ ಸಿದ್ದರಾಮೇಶ್ವರ ಗಲ್ಲಿಯಲ್ಲಿ ವಾಸವಾಗಿದ್ದ ಮಂಜುನಾಥ ಕೋಳಿಪುಚ್ಚ ಅವರನ್ನು ಹಾಸನಕ್ಕೆ ಗಡಿಪಾರು ಮಾಡಿ ಅವರು ಆದೇಶಿಸಿದರು. ಹಳಿಯಾಳ ಪೊಲೀಸರು ಆರೋಪಿಯನ್ನು ಹಾಸನ ಗ್ರಾಮೀಣ ಠಾಣೆಗೆ ಕರೆದೊಯ್ದು ಬಿಟ್ಟು ಬಂದರು.