ಅಂಕೋಲಾ ಹಾರವಾಡದ ವಿಷ್ಣು ನಾಯ್ಕ ಅವರ ಮನೆಗೆ ಬಂದಿದ್ದ ಹೆಬ್ಬಾವು ಅವರು ಸಾಕಿದ್ದ ಕೋಳಿಗಳನ್ನು ನುಂಗಿದೆ. ಹೊಟ್ಟೆ ತುಂಬಿದ ನಂತರ ಹೊರಗೆ ಹೋಗದ ಆ ಹಾವು ಅದೇ ಕೋಳಿ ಗೂಡಿನಲ್ಲಿ ನಿದ್ರಿಸಿದೆ!
ಅಂಕೋಲಾದ ವಿಷ್ಣು ನಾಯ್ಕ ಅವರು ಅನೇಕ ಕೋಳಿಗಳನ್ನು ಸಾಕಿದ್ದು, ಕೋಳಿಗಳ ಆಶ್ರಯಕ್ಕಾಗಿ ಅಚ್ಚುಕಟ್ಟಾದ ಗೂಡು ನಿರ್ಮಿಸಿದ್ದಾರೆ. ಕೋಳಿ ಸಾಕಿದ ವಾಸನೆಗೆ ಬುಧವಾರ ಅಲ್ಲಿಗೆ ಬಂದ ಹೆಬ್ಬಾವು ಎರಡು ಕೋಳಿಗಳನ್ನು ಹಿಡಿದಿದೆ. ಗೂಡಿನಲ್ಲಿಯೇ ಮಲಗಿ ಆ ಕೋಳಿಗಳನ್ನು ಭಕ್ಷಿಸಿದೆ. ಈ ವೇಳೆ ಇನ್ನಿತರ ಕೋಳಿಗಳು ತಪ್ಪಿಸಿಕೊಂಡಿದ್ದು, ಅದಾದ ನಂತರ ಹಾವು ಅಲ್ಲಿಯೇ ನಿದ್ರಿಸಿದೆ.
ಭಾರೀ ಗಾತ್ರದ ಹೆಬ್ಬಾವು ನೋಡಿದ ಕುಟುಂಬದವರು ಮೊದಲು ಆತಂಕಕ್ಕೆ ಒಳಗಾಗಿದ್ದಾರೆ. ಹಾವಿನ ಚಲನೆ ಇಲ್ಲದಿರುವುದನ್ನು ನೋಡಿ ಅದು ಸಾವನಪ್ಪಿರಬಹುದು ಎಂದು ಅಂದಾಜಿಸಿದ್ದಾರೆ. ಅದಾಗಿಯೂ, ಹಾವು ಮುಟ್ಟುವ ಧೈರ್ಯ ತೋರದೇ ಉರಗ ತಜ್ಞ ಪ್ರಶಾಂತ ಕಳಸ್ ಅವರಿಗೆ ಫೋನ್ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪ್ರಶಾಂತ ಕಳಸ್ ಅವರು ಮಲಗಿದ್ದ ಹೆಬ್ಬಾವನ್ನು ಎಬ್ಬಿಸಿ, ಚೀಲಕ್ಕೆ ತುಂಬಿದ್ದಾರೆ.
ಹಾವುಗಳ ಮಹತ್ವ ಹಾಗೂ ಸಂರಕ್ಷಣೆಯ ಬಗ್ಗೆ ಪ್ರಶಾಂತ ಕಳಸ್ ಅವರು ಜನರಿಗೆ ಅರಿವು ಮೂಡಿಸಿದ್ದಾರೆ. `ಹೆಬ್ಬಾವು ವಿಷಕಾರಿ ಅಲ್ಲ. ಹಸಿವಿನಿಂದಾಗಿ ಅದು ಊರು ಪ್ರವೇಶಿಸಿದ್ದು, ಅದಕ್ಕೆ ತೊಂದರೆ ಕೊಡಬೇಡಿ’ ಎಂದು ಮನವಿ ಮಾಡಿದ್ದಾರೆ. ಅದಾದ ನಂತರ ಹಾವನ್ನು ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.