ಯಲ್ಲಾಪುರ-ಹುಬ್ಬಳ್ಳಿ ಮುಖ್ಯ ರಸ್ತೆಯ ಕೆ ಮಿಲನ್ ಹೊಟೇಲ್ ಬಳಿಯ ಮುದ್ದಿನಗದ್ದೆ ಕ್ರಾಸಿನಲ್ಲಿ ಮೊನ್ನೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ. ಕಾರಿಗೆ ಸ್ಕೂಟಿ ಗುದ್ದಿದ ಪರಿಣಾಮ ಗಾಯಗೊಂಡಿದ್ದ ಸ್ಕೂಟಿ ಸವಾರರಿಬ್ಬರನ್ನು ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲಿಸಲಾಗಿದ್ದು, ಅಲ್ಲಿಯೂ ಚಿಕಿತ್ಸೆ ಫಲಕಾರಿಯಾದೇ ರಾಘವೇಂದ್ರ ಮರಾಠಿ ಅವರು ಸಾವನಪ್ಪಿದ್ದಾರೆ.
ಯಲ್ಲಾಪುರ ಕನ್ನಡಗಲ್ ಹಿಟ್ಟಿನಬೈಲಿನ ರಾಘವೇಂದ್ರ ಚೂಡಾಮಣಿ ಮರಾಠಿ ಹಾಗೂ ದಯಾನಂದ ಚಂದ್ರು ನಾಯ್ಕ ಅವರು ಜೂನ್ 13ರಂದು ಸ್ಕೂಟಿ ಮೇಲೆ ಹೊರಟಿದ್ದರು. ಹುಬ್ಬಳ್ಳಿ ಕಡೆ ಹೊರಟ ಅವರ ಸ್ಕೂಟಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಹುಬ್ಬಳ್ಳಿಯಲ್ಲಿ ವಾಸವಾಗಿರುವ ರಾಜಸ್ಥಾನದ ಅಭಿಷೇಖ ಭಾರತಭೂಷಣ ಅವರು ಆ ಕಾರು ಓಡಿಸುತ್ತಿದ್ದು, ಅವರೇ ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದಾದ ನಂತರ ಸ್ಥಳೀಯರು ಅಲ್ಲಿ ಜಮಾಯಿಸಿ ಗಾಯಗೊಂಡ ಬೈಕ್ ಸವಾರರಿಬ್ಬರನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದರು.
ಈ ಅಪಘಾತದಲ್ಲಿ ದಯಾನಂದ ನಾಯ್ಕ ಅವರ ತಲೆ, ಕೆನ್ನೆ, ಕೈ-ಕಾಲುಗಳಿಗೆ ಗಾಯವಾಗಿತ್ತು. ರಾಘವೇಂದ್ರ ಮರಾಠಿ ಅವರ ಇಡೀ ದೇಹ ಜರ್ಜರಿತವಾಗಿತ್ತು. ಯಲ್ಲಾಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ರಾಘವೇಂದ್ರ ಮರಾಠಿ ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರನ್ನು ಬದುಕಿಸಿಕೊಳ್ಳುವ ಎಲ್ಲಾ ಬಗೆಯ ಪ್ರಯತ್ನವೂ ನಡೆಯಿತು. ಆದರೆ, ಅದು ಪ್ರಯೋಜನಕ್ಕೆ ಬರಲಿಲ್ಲ. ಜೂನ್ 14ರ ಸಂಜೆ ರಾಘವೇಂದ್ರ ಮರಾಠಿ ಅವರು ಸಾವನಪ್ಪಿದ್ದು, ಹುಬ್ಬಳ್ಳಿ ವಿದ್ಯಾನಗರ ಪೊಲೀಸರು ಯಲ್ಲಾಪುರ ಪೊಲೀಸ್ ಠಾಣೆಗೆ ಈ ಬಗ್ಗೆ ಇಮೇಲ್ ಮಾಡಿ ವಿಷಯ ತಿಳಿಸಿದರು.