ಅಂಕೋಲಾ ಪಟ್ಟಣದ ನಾಡವರ ಸಮುದಾಯ ಭವನ ಪಕ್ಕದ ಸ್ಮಶಾನ ರಸ್ತೆಯಲ್ಲಿ ಅಲೆದಾಡುತ್ತಿದ್ದ ಅವರ್ಸಾದ ಸಂದೇಶ ನಾಯ್ಕ ಅವರ ವೈದ್ಯಕೀಯ ವರದಿ `ಪಾಸಿಟಿವ್’ ಬಂದಿದೆ. ಹೀಗಾಗಿ ಸಂದೇಶ ನಾಯ್ಕ ಅವರು ಮಾದಕ ವ್ಯಸನಿಯಾಗಿದ್ದು ಖಚಿತವಾಗಿದ್ದು, ನಿಷೇಧಿತ ಮಾದಕ ವಸ್ತು ಸೇವನೆ ಮಾಡಿದ ಅವರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಅಂಕೋಲಾದ ಅವರ್ಸಾ ಬಳಿಯ ಹಟ್ಟಿಕೇರಿಯಲ್ಲಿ ಸಂದೇಶ ಜಾನು ನಾಯ್ಕ ಅವರು ವಾಸವಾಗಿದ್ದಾರೆ. 29 ವರ್ಷದ ಅವರು ಅಲ್ಲಿ-ಇಲ್ಲಿ ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಕುಟುಂಬಕ್ಕೆ ಆಧಾರವಾಗಬೇಕಿದ್ದ ಅವರು ಸಣ್ಣ ವಯಸ್ಸಿನಲ್ಲಿಯೇ ಅಡ್ಡದಾರಿ ಹಿಡಿದಿದ್ದಾರೆ. ದುಶ್ಚಟಗಳಿಗೆ ದಾಸರಾಗಿರುವ ಅವರು ಗಾಂಜಾ ಸೇವನೆಗೆ ಮರಳಾಗಿದ್ದಾರೆ. ಬಾಯಿಂದ ಗಬ್ಬು ವಾಸನೆ ಬರುವ ಬಗ್ಗೆ ಗೊತ್ತಿದ್ದರೂ ಸಂದೇಶ ನಾಯ್ಕ ಅವರು ಮಾದಕ ವಸ್ತುಗಳ ಸೇವನೆಯಿಂದ ಹೊರ ಬಂದಿಲ್ಲ.
ಜೂನ್ 14ರಂದು ಅಂಕೋಲಾ ಪಟ್ಟಣದ ನಾಡವರ ಸಮುದಾಯದ ಭವನದ ಬಳಿ ಸ್ಮಶಾನಕ್ಕೆ ಹೋಗುವ ರಸ್ತೆಯಲ್ಲಿ ಸಂದೇಶ ನಾಯ್ಕ ಅವರು ಅನುಮಾನಾಸ್ಪದ ರೀತಿ ಅಲೆದಾಡುತ್ತಿದ್ದರು. ಪಿಸೈ ಗುರುನಾಥ ಹಾದಿಮನಿ ಅವರು ಆ ವೇಳೆ ಅಲ್ಲಿ ಆಗಮಿಸಿದ್ದು, ಸಂದೇಶ ನಾಯ್ಕ ಅವರನ್ನು ಮಾತನಾಡಿಸಿದರು. ಸಂದೇಶ ನಾಯ್ಕ ಅವರ ಬಾಯಿಂದ ಕೆಟ್ಟ ವಾಸನೆ ಬಂದಿದನ್ನು ಪೊಲೀಸರು ಸಹಿಸಲಿಲ್ಲ. ಗಟ್ಟಿಯಾಗಿ ಕೇಳಿದಾಗ `ಸರ್ ನಾನೂ ಗಾಂಜಾ ಸೇವಿಸಿದ್ದೇನೆ’ ಎಂದು ಸಂದೇಶ ನಾಯ್ಕ ಅವರೇ ಒಪ್ಪಿಕೊಂಡರು. ಅದಾಗಿಯೂ, ಪೊಲೀಸರು ಅವರನ್ನು ಆಸ್ಪತ್ರೆಗೆ ಕರೆತಂದರು.
ವೈದ್ಯರು ಸಂದೇಶ ನಾಯ್ಕ ಅವರ ಮೂತ್ರ ಪರೀಕ್ಷೆ ಮಾಡಿದರು. ಆ ವರದಿಯೂ ಪಾಸಿಟಿವ್ ಎಂದು ಬಂದಿದ್ದು, ಸಂದೇಶ ನಾಯ್ಕ ಅವರು ವಿಪರೀತ ಪ್ರಮಾಣದಲ್ಲಿ ಅಮಲಿನಲ್ಲಿರುವುದನ್ನು ದೃಢೀಕರಿಸಿತು. ಅತ್ಯಂತ ಅಪಾಯಕಾರಿ ಹಾಗೂ ನಿಷೇಧಿತ ಮಾದಕ ವಸ್ತು ಸೇವಿಸಿದ ಹಿನ್ನಲೆ ಪೊಲೀಸರು ಸಂದೇಶ ನಾಯ್ಕ ಅವರ ವಿರುದ್ಧ ಕೇಸು ದಾಖಲಿಸಿದರು. ಮಾದಕ ವ್ಯಸನದ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಿ, ಎಚ್ಚರಿಕೆಯನ್ನು ನೀಡಿದರು.