ಹಳಿಯಾಳದ ಮೌರ್ಯ ಬಾರ್ & ರೆಸ್ಟೋರೆಂಟ್ ಎದುರು ಪೊಲೀಸರ ಮೇಲೆ ದಾಳಿ ಮಾಡಿದ ರೌಡಿ ಮಚ್ ಮಂಜಾ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರ ಮೇಲೆ ದಾಳಿ ಮಾಡಿದರೂ ಕ್ರಮವಾಗಿಲ್ಲ ಎಂಬ ಆಕ್ಷೇಪಣೆ ಸಾರ್ವಜನಿಕ ವಲಯದಿಂದ ಕೇಳಿ ಬಂದಿದ್ದು, ಅದಕ್ಕೆ ಪ್ರತ್ಯುತ್ತರವಾಗಿ ರೌಡಿಯ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ.
ಹಳಿಯಾಳ ನಿರಲಗಾದ ಮಂಜುನಾಥ ಸುಬ್ರಾಯ ಬೇಕನಿ (ಮಚ್ಚ್ ಮಂಜಾ) ದಾದಾಗಿರಿ ಮಾಡಿಯೇ ಎಲ್ಲರನ್ನು ಹೆದರಿಸುತ್ತಿದ್ದರು. ಜೂನ್ 14ರ ರಾತ್ರಿಯೂ ಅವರು ಮೌರ್ಯ ಬಾರ್ & ರೆಸ್ಟೋರೆಂಟ್ ಎದುರು ಗಲಾಟೆ ಮಾಡಿದ್ದರು. ಗಲಾಟೆ ತಡೆಯಲು ಬಂದ ಪಿಸೈ ಬಸವರಾಜ ಮಬನೂರು ಅವರ ಪೊಲೀಸ್ ಜೀಪಿಗೆ ಅಡ್ಡಗಟ್ಟಿ ರಂಪಾಟ ಮಾಡಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ನಂದೀಶ್ವರ ಗುಡ್ಡೋಡಗಿ, ಅಶೋಕ ಬಸಲಿಂಗಪ್ಪ ಹುಬ್ಬಳ್ಳಿ ಹಾಗೂ ಹನುಮಂತ ಓಂಕಾರಪ್ಪ ಬರಗಿ ಅವರ ಮೇಲೆಯೂ ಮಚ್ಚ್ ಮಂಜಾ ಆಕ್ರಮಣ ಮಾಡಿದ್ದರು.
ಹೊಟೇಲ್ ಮುಂದಿನ ಪಾನ್ ಅಂಗಡಿ ಎದುರು ರಾಘವೇಂದ್ರ ದತ್ತಾ ಬಾಂದೇಕರ್ ಹಾಗೂ ಮಂಜುನಾಥ ಸುಬ್ರಾಯ ಬೇಕನಿ ನಡುವೆ ಗಲಾಟೆ ಶುರುವಾಗಿದ್ದು, ಅದನ್ನು ತಡೆಯಲು ಹೋಗಿದ್ದ ಹೊಟೇಲ್ ಸಿಬ್ಬಂದಿ ಬಸವರಾಜ ಹಾಗೂ ರಾಘವೇಂದ್ರ ಅವರ ಮೇಲೆಯೂ ಆಕ್ರಮಣ ನಡೆದಿತ್ತು. ಹೊಟೇಲ್ ಮ್ಯಾನೇಜರ್ ಸದಾಶಿವ ಪೂಜಾರಿ ಅವರು ಅಲ್ಲಿಗೆ ಆಗಮಿಸಿದ್ದು, ಅವರ ಮೇಲೆಯೂ ಮಂಜುನಾಥ ಬೇಕನಿ ಹಲ್ಲೆ ಮಾಡಿದ್ದರು.
ಆ ಗಲಾಟೆ ತಡೆಗೆ ಹೋಗಿದ್ದ ಪೊಲೀಸರ ಮೇಲೆ ದಾಳಿ ನಡೆದ ವಿಡಿಯೋ ವೈರಲ್ ಆಗಿದ್ದು, ಅದಾದ ನಂತರ ಹೊಟೇಲ್ ಮ್ಯಾನೇಜರ್ ಸದಾಶಿವ ಪೂಜಾರಿ ಅವರು ನೀಡಿದ ದೂರಿನ ಅನ್ವಯ ಪೊಲೀಸರು ಮಂಜುನಾಥ ಸುಬ್ರಾಯ ಬೇಕನಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅದಾದ ನಂತರ ಇದೀಗ ಪೊಲೀಸರ ಮೇಲೆ ಆಕ್ರಮಣ ನಡೆಸಿದ ಬಗ್ಗೆ ಮತ್ತೊಂದು ಪ್ರಕರಣವನ್ನು ದಾಖಲಿಸಿದ್ದಾರೆ. ಪ್ರತ್ಯಕ್ಷದರ್ಶಿಯಾಗಿರುವ ಬಸವರಾಜ ಮಬನೂರು ಅವರೇ ಈ ಪ್ರಕರಣದ ದೂರುದಾರರಾಗಿದ್ದು, ಕಠಿಣ ಕ್ರಮ ಜರುಗಿಸಿದ್ದಾರೆ.