ಸಾಮಾನ್ಯವಾಗಿ ನಾವು ದೇಹದ ಆರೋಗ್ಯ ಹಾಗೂ ಶುಚಿತ್ವ ಕಾಪಾಡಿಕೊಳ್ಳಲು ಸ್ನಾನ ಮಾಡುತ್ತೇವೆ. ನಿತ್ಯದ ಸ್ನಾನ ಇನ್ನು ಒಳ್ಳೆಯದು. ಆದರೆ ಇತ್ತೀಚಿನ ಕೆಲವು ವರದಿಗಳು ಸ್ನಾನ ಮಾಡುವುದರಿಂದಲೂ ಸಾವು ಬರುತ್ತದೆ ಎಂದು ಹೇಳಿವೆ. ಹಾಗಾದರೆ ಸ್ನಾನ ಮಾಡುವುದು ಸರಿಯಲ್ಲವೇ ? ಖಂಡಿತ ಮಾಡಬೇಕು. ಆದರೆ ಹೃದಯ ಸಂಬಂಧಿ ಖಾಯಿಲೆ ಇರುವವರು ಸ್ವಲ್ಪ ಜಾಗೃತೆ ವಹಿಸಬೇಕು.
ಸ್ನಾನ ಮಾಡುವಾಗ ಹೃದಯಾಘಾತ ಸಂಭವಿಸಬಹುದು ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಕೇಳಿಬರುತ್ತದೆ. ಇದನ್ನು ಕೇಳಿದ ಹಲವರು ಆತಂಕಕ್ಕೊಳಗಾಗುತ್ತಾರೆ. ಆದರೆ ವೈದ್ಯರ ಪ್ರಕಾರ, ಸ್ನಾನ ಮಾಡುವುದರಿಂದಲೇ ನೇರವಾಗಿ ಹೃದಯಾಘಾತ ಉಂಟಾಗುವುದಿಲ್ಲ. ಆದರೂ ಕೆಲವು ಸಂದರ್ಭಗಳಲ್ಲಿ ಎಚ್ಚರಿಕೆ ಅಗತ್ಯ. ತುಂಬಾ ತಣ್ಣನೆಯ ಅಥವಾ ಅತಿಯಾಗಿ ಬಿಸಿಯಾದ ನೀರನ್ನು ಹಠಾತ್ತನೆ ದೇಹಕ್ಕೆ ಸುರಿದಾಗ ದೇಹದ ರಕ್ತನಾಳಗಳಲ್ಲಿ ತಕ್ಷಣದ ಬದಲಾವಣೆ ಉಂಟಾಗಬಹುದು. ತಣ್ಣೀರು ರಕ್ತನಾಳಗಳನ್ನು ಸಂಕುಚಿತಗೊಳಿಸಿ ರಕ್ತದೊತ್ತಡ ಮತ್ತು ಹೃದಯದ ಬಡಿತವನ್ನು ಹೆಚ್ಚಿಸಬಹುದು. ಮತ್ತೊಂದೆಡೆ, ಅತಿಯಾದ ಬಿಸಿನೀರು ರಕ್ತನಾಳಗಳನ್ನು ಹಿಗ್ಗಿಸಿ ತಲೆಸುತ್ತು ಅಥವಾ ಒತ್ತಡದ ಏರುಪೇರಿಗೆ ಕಾರಣವಾಗಬಹುದು.
ಹೃದಯರೋಗ, ಅಧಿಕ ರಕ್ತದೊತ್ತಡ ಅಥವಾ ಹೃದಯ ಬಡಿತದ ಅಸಹಜತೆ ಇರುವವರಿಗೆ ಈ ರೀತಿಯ ಹಠಾತ್ ಬದಲಾವಣೆಗಳು ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ. ವೈದ್ಯರು ಸ್ನಾನ ಆರಂಭಿಸುವಾಗ ಮೊದಲು ಕೈ, ಕಾಲು ಮತ್ತು ಎದೆ ಭಾಗಕ್ಕೆ ನೀರು ಹಾಕಿ, ನಂತರ ನಿಧಾನವಾಗಿ ತಲೆ ಮತ್ತು ಉಳಿದ ದೇಹಕ್ಕೆ ನೀರು ಸುರಿಯುವಂತೆ ಸಲಹೆ ನೀಡುತ್ತಾರೆ. ಆರೋಗ್ಯವಂತ ವ್ಯಕ್ತಿಗಳಿಗೆ ಸಾಮಾನ್ಯವಾಗಿ ಸ್ನಾನದಿಂದ ಯಾವುದೇ ಅಪಾಯವಿಲ್ಲ. ಆದರೆ ದೇಹದ ಸಂಕೇತಗಳನ್ನು ನಿರ್ಲಕ್ಷಿಸಬಾರದು. ಸ್ನಾನದ ವೇಳೆ ಎದೆನೋವು, ತಲೆಸುತ್ತು ಅಥವಾ ಉಸಿರಾಟದ ತೊಂದರೆ ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಉತ್ತಮ ಎಂದು ವರದಿಗಳು ತಿಳಿಸಿವೆ.