ಶಿರಸಿ – ಹಾವೇರಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸರ್ಕಾರಿ ಬಸ್ಸಿಗೆ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರ ಅನೀಲ ನಾಯ್ಕ ಅವರು ಅಲ್ಲಿಯೇ ಸಾವನಪ್ಪಿದ್ದಾರೆ.
ಶಿರಸಿ KSRTC ಡಿಪೋದಲ್ಲಿ ಈಶ್ವರ ಗುರುಬಸಪ್ಪ ಮನಿಗೇರಿ ಅವರು ಚಾಲಕರಾಗಿದ್ದಾರೆ. ಶಿರಸಿ-ಹಾವೇರಿ ಮಾರ್ಗದಲ್ಲಿ ಅವರು ಬಸ್ಸು ಓಡಿಸುತ್ತಾರೆ. ಅದರಂತೆ, ಜೂನ 13ರಂದು ಅವರು ಹಾವೇರಿ ಕಡೆಯಿಂದ ಶಿರಸಿ ಕಡೆ ಬಸ್ಸು ಓಡಿಸಿಕೊಂಡು ಬಂದಿದ್ದರು. ದೊಡ್ಡಳ್ಳಿ ಬಳಿ ಅವರ ಬಸ್ಸಿಗೆ ಬೈಕು ಡಿಕ್ಕಿಯಾಯಿತು. ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರ ಅನೀಲ ನಾಯ್ಕ ಅವರು ಅಲ್ಲಿಯೇ ಬಿದ್ದು ಸಾವನಪ್ಪಿದರು.
ಶಿರಸಿಯ ಬುಗಡಿಕೊಪ್ಪದಲ್ಲಿ ಅನೀಲ ರವಿ ನಾಯ್ಕ (30) ಅವರು ವಾಸವಾಗಿದ್ದರು. ಈ ದಿನ ಅವರು ವೇಗವಾಗಿ ಬೈಕ್ ಓಡಿಸಿದ್ದು ಅಪಘಾತಕ್ಕೆ ಕಾರಣವಾಯಿತು. ಶಿರಸಿ ಕಡೆಯಿಂದ ಹಾವೇರಿ ಕಡೆಗೆ ಹೊರಟಿದ್ದ ಅವರು ದೊಡ್ಡೂರು ಗ್ರಾಮದ ಬಳಿ ಎದುರಿನಿಂದ ಬಸ್ಸಿಗೆ ಬೈಕು ಡಿಕ್ಕಿ ಹೊಡೆದರು. ವಿರುದ್ಧ ದಿಕ್ಕಿನಲ್ಲಿ ಬಂದ ಬೈಕು ಬಸ್ಸಿಗೆ ಗುದ್ದಿದ ರಭಸಕ್ಕೆ ಬಸ್ಸಿಗೂ ಹಾನಿಯಾಯಿತು. ಬೈಕ್ ಸಹ ಜಖಂ ಆಯಿತು.
ಗಾಯಗೊಂಡು ಬಿದ್ದಿದ್ದ ಅನೀಲ ನಾಯ್ಕ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಯಿತು. ಅಪಘಾತದ ನಂತರ ಅವರು ಪ್ರಜ್ಞೆ ತಪ್ಪಿದ ಬಗ್ಗೆ ಊಹಿಸಲಾಗಿದ್ದು, ಆಂಬುಲೆನ್ಸ್ ಬರುವುದರೊಳಗೆ ಅವರು ಸಾವನಪ್ಪಿದರು.