ಕಾರವಾರದಲ್ಲಿ ವಾಸವಾಗಿದ್ದ ಶಿರಸಿಯ ತಿಲಕ್ ಬೈಂದೂರು ಅವರ ಬೈಕ್ ಕದ್ದಿದ್ದ ಶಿರಸಿಯ ನೆಹರು ನಗರದ ಕೋಟೆಕೆರೆ ನಿವಾಸಿ ನಿಯಾಜ್ ಮೋಟು ದಸ್ತಗಿರ್ ಶೇಖ್ ಮತ್ತೆ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಎರಡು ವರ್ಷದಿಂದ ಮಾರುವೇಷದಲ್ಲಿ ಓಡಾಡುತ್ತಿದ್ದ ಆರೋಪಿಯನ್ನು ಪೊಲೀಸರು ಶಿವಮೊಗ್ಗದ ಸಾಗರದಲ್ಲಿ ಹಿಡಿದಿದ್ದಾರೆ.
ಶಿರಸಿ ಗಾಂಧೀನಗರದ ತಿಲಕ್ ಬೈಂದೂರು ಅವರು ಇಂಜಿನಿಯರ್ ಆಗಿದ್ದಾರೆ. ಅವರು 2018ರಲ್ಲಿ ಕಾರವಾರದ ಮಾರುತಿ ಗಲ್ಲಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಮನೆ ಮುಂದೆ ನಿಲ್ಲಿಸಿದ್ದ ಬೈಕನ್ನು ನಿಯಾಜ್ ಶೇಖ್ ಅವರು ಕದ್ದಿದ್ದರು. ಜೂನ್ 2ರ ರಾತ್ರಿ ಜೋರು ಮಳೆಯಿದ್ದ ಕಾರಣ ರಾಯಲ್ ಎನ್‌ಪಿಲ್ಡ್ ಬೈಕ್ ಕಾಣೆಯಾದರೂ ಆ ಬಗ್ಗೆ ಅದೇ ದಿನ ಅವರ ಗಮನಕ್ಕೆ ಬಂದಿರಲಿಲ್ಲ. ಮರುದಿನ ಎಲ್ಲಾ ಕಡೆ ಹುಡುಕಿದರೂ ಬೈಕ್ ಸಿಕ್ಕಿರಲಿಲ್ಲ. ಬೈಕ್ ಕದ್ದವರು ಅದನ್ನು ಅಂಕೋಲಾ ಅಥವಾ ಕುಮಟಾದಲ್ಲಿ ಬಿಟ್ಟು ಹೋಗಬಹುದು ಎಂದು ಅಂದಾಜಿಸಿದ ತಿಲಕ್ ಬೈಂದೂರು ಅವರು ಅಲ್ಲಿಯೂ ಶೋಧ ನಡೆಸಿದ್ದರು. ಆದರೆ, ಬೈಕ್ ಮಾತ್ರ ಸಿಕ್ಕಿರಲಿಲ್ಲ.
ಅದಾದ ನಂತರ ಬೈಕ್ ಕಾಣೆಯಾದ ಬಗ್ಗೆ ತಿಲಕ್ ಬೈಂದೂರು ಅವರು ಕಾರವಾರ ಶಹರ ಪೊಲೀಸ್ ಠಾಣೆಗೆ ದೂರಿದ್ದರು. ಪಿಸೈ ಸುಂದರಿ ಅವರು ಪ್ರಕರಣ ದಾಖಲಿಸಿ ಬೈಕ್ ಹುಡುಕಾಟ ಶುರು ಮಾಡಿದ್ದರು. ಆಗ, ಶಿರಸಿಯ ನೆಹರು ನಗರದ ಕೋಟೆಕೆರೆ ಸಮೀಪದ ನಿವಾಸಿ ನಿಯಾಜ್ ಅಲಿಯಾಸ್ ಮೋಟು ದಸ್ತಗಿರ್ ಶೇಖ್ ಬೈಕ್ ಕದ್ದಿರುವುದು ಗೊತ್ತಾಯಿತು. ಪೊಲೀಸರು ಆಗಲೇ ಆರೋಪಿಯನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಆದರೆ, ಜಾಮೀನುಪಡೆದ ಆರೋಪಿ ತಲೆಮರೆಸಿಕೊಂಡಿದ್ದು, ಎರಡು ವರ್ಷದಿಂದ ಯಾರ ಕಣ್ಣಿಗೂ ಬಿದ್ದಿರಲಿಲ್ಲ.
ಸದ್ಯ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಿಯಾಜ್ ಶೇಖ್ ಅಡಗಿರುವ ಮಾಹಿತಿ ಆಧರಿಸಿ ಪೊಲೀಸರು ಅಲ್ಲಿ ದಾಳಿ ಮಾಡಿದರು. ಆರೋಪಿಯನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಿದರು.