ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಮನೆಯೊಂದರಲ್ಲಿ ಬಾಂಬ್ ಸ್ಪೋಟಿಸಿದೆ. ಸ್ಪೋಟದ ತೀವೃತೆಗೆ ಆ ಮನೆಯ ಗೋಡೆ ಕುಸಿದಿದ್ದು, ಇನ್ನಿತರ ಮನೆಗಳ ಚಾವಣಿ ಹಾರಿ ಹೋಗಿದೆ.
ಹಳಿಯಾಳ ತಾಲೂಕಿನ ಕಾಳಗಿನಕೊಪ್ಪ ಗ್ರಾಮದಲ್ಲಿ ಬೆಳಗಿನ ಜಾವ ಈ ಸ್ಪೋಟ ಉಂಟಾಗಿದೆ. ಶಂಕರ ನಿಂಗಪ್ಪ ಬೆಡದೋಳ್ಕರ್, ಅಪ್ಪಾರಾವ್ ನಿಂಗಪ್ಪ ಬೆಡದೋಳ್ಕರ್ ಅವರ ಜೊತೆ ಪೀಶಪ್ಪ ಲೋಕಪ್ಪ ದೊಡ್ಡ ಗೌಡ ಅವರ ಮನೆಗೆ ಹಾನಿಯಾಗಿದೆ. ಬಾಂಬ್ ಸ್ಪೋಟಕ್ಕೆ ಕಾರಣರಾದವರು ಬಾಂಬು ಹಾಗೂ ಇನ್ನಿತರ ಸಾಮಗ್ರಿಗಳನ್ನು ಕೆರೆ ಸಮೀಪ ಎಸೆದು ಪರಾರಿಯಾಗಿದ್ದಾರೆ. ಮನೆಯಲ್ಲಿ ದಾಸ್ತಾನು ಮಾಡಿದ್ದ ನಾಡಬಾಂಬ್’ಗೆ ಬೆಂಕಿ ತಗುಲಿ ಸ್ಪೋಟ ಸಂಭವಿಸಿದ ಅನುಮಾನಗಳಿವೆ. ವನ್ಯಜೀವಿ ಹತ್ಯೆಗಾಗಿ ಬಾಂಬ್ ದಾಸ್ತಾನು ಮಾಡಿದ ಶಂಕೆವ್ಯಕ್ತವಾಗಿದೆ.
ಸೋಮವಾರ ಮುಂಜಾನೆ ದೊಡ್ಡ ಸದ್ದು ಕೇಳಿ ಊರಿನ ಜನ ಬೆಚ್ಚಿ ಬಿದ್ದಿದ್ದಾರೆ. ನಿದ್ರೆಯಲ್ಲಿದ್ದ ಮನೆ ಮಾಲಕ ಸ್ಪೋಟದ ಸದ್ದಿನಿಂದ ಎದ್ದಿದ್ದು, ನಂತರ ಅಲ್ಲಿದ್ದ ಇನ್ನಿತರ ಬಾಂಬುಗಳ ಜೊತೆ ಪರಾರಿಯಾದ ಮಾಹಿತಿಯಿದೆ. ಸ್ಪೋಟದ ರಭಸಕ್ಕೆ ಮನೆಯೊಂದು ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಇನ್ನಿತರ ಮನೆಯವರು ಸಮಸ್ಯೆ ಅನುಭವಿಸಿದ್ದಾರೆ. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಆರೋಪಿಗಳ ಶೋಧ ನಡೆಸಿದ್ದಾರೆ.