ಅಂಕೋಲಾ ವಾಸರಕುದ್ರಿಗೆಯ ನಾಗೇಶ್ ಆಗೇರ್ ಅವರು ಪತ್ನಿ ಜೊತೆ ಜಗಳ ಮಾಡಿಕೊಂಡಿದ್ದು, ಪತ್ನಿ ಮನೆ ಬಿಟ್ಟು ಹೋದ ದುಖಃ ಸಹಿಸಲಾಗದೇ ಸಾವಿಗೆ ಶರಣಾಗಿದ್ದಾರೆ. ಮೊಗಟಾದ ಪ್ರಶಾಂತ ನಾಯಕ ಅವರ ತೋಟದ ಮನೆಯಲ್ಲಿ ನಾಗೇಶ್ ಆಗೇರ್ ಅವರು ನೇಣು ಹಾಕಿಕೊಂಡಿದ್ದಾರೆ.
ಅoಕೋಲಾದ ವಾಸರಕುದ್ರಿಗೆ ಮೇಲಿನಕುಳಿಯಲ್ಲಿ ನಾಗೇಶ ಜಂಗ್ರು ಆಗೇರ್ (50) ಅವರು ವಾಸವಾಗಿದ್ದರು. ಮೊಗಟಾದ ಪ್ರಶಾಂತ ನಾಯಕ ಅವರ ಕಿಂಕಣಿ ಶಿವಪುರ ತೋಟದ ಮನೆಗೆ ಅವರು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಆಗಾಗ ಸರಾಯಿ ಸೇವನೆ ಮಾಡುತ್ತಿದ್ದ ನಾಗೇಶ್ ಆಗೇರ್ ಅವರು ಜೂನ್ 7ರಂದು ವಿಪರೀತ ಪ್ರಮಾಣದಲ್ಲಿ ಸರಾಯಿ ಕುಡಿದಿದ್ದರು. ಕುಡಿತದ ನಶೆಯಲ್ಲಿಯೇ ಅವರು ತಮ್ಮ ಮಗನ ಮೇಲೆ ಕೈ ಮಾಡಿದ್ದರು. ಮಗನಿಗೆ ಹೊಡೆದ ವಿಷಯವಾಗಿ ಕುಟುಂಬದಲ್ಲಿ ಕಲಹ ನಡೆದಿದ್ದು, ನಾಗೇಶ್ ಆಗೇರ್ ಅವರ ಪತ್ನಿ ಶಾಂತಿ ಆಗೇರ್ ಅವರು ಮುನಿಸಿಕೊಂಡು ತವರು ಮನೆಗೆ ಹೋಗಿದ್ದರು. ಮಗನನ್ನು ಸಹ ಅವರು ಕರೆದೊಯ್ದಿದ್ದರು.
ಕುಡಿತದ ನಶೆ ಕಡಿಮೆಯಾದ ನಂತರ ನಾಗೇಶ್ ಆಗೇರ್ ಅವರು ಪಶ್ಚಾತಾಪ ಅನುಭವಿಸಿದರು. ವಾರ ಕಳೆದರೂ ಪತ್ನಿ ಹಾಗೂ ಮಗ ಮನೆಗೆ ಬಾರದ ಕಾರಣ ಬೇಸರಗೊಂಡರು. ಪತ್ನಿ ಹಾಗೂ ಮಗ ತಮ್ಮಿಂದ ದೂರವಾದ ವಿಷಯ ಅರಗಿಸಿಕೊಳ್ಳಲಾಗದೇ ಅವರು ದುಡುಕು ನಿರ್ಧಾರಕ್ಕೆ ಮುಂದಾದರು. ಜೂನ್ 12ರಂದು ಮೊಗಟಾದ ಪ್ರಶಾಂತ ನಾಯಕ ಅವರ ಕಿಂಕಣಿ ಶಿವಪುರ ತೋಟದ ಮನೆಗೆ ಹೋಗಿದ್ದ ನಾಗೇಶ್ ಆಗೇರ್ ಅವರು ಅಲ್ಲಿಯೇ ನೇಣಿಗೆ ಶರಣಾದರು.