ಮಾವಿನ ಹಣ್ಣು ಎಂದರೆ ಸಿಹಿ. ಆದರೆ ಹಣ್ಣು ತಿಂದ ಬಳಿಕ ಉಳಿಯುವ ಗೊರಟೆಯೂ ಒಂದು ಸವಿಯಾದ ಖಾದ್ಯವಾಗಬಹುದು ಎಂಬುದು ಅನೇಕರಿಗೆ ಗೊತ್ತಿಲ್ಲ. ಮಲೆನಾಡು ಮತ್ತು ಕರಾವಳಿ ಕರ್ನಾಟಕದ ಗ್ರಾಮೀಣ ಮನೆಗಳಲ್ಲಿ ಮಾವಿನ ಗೊರಟೆಯಿಂದ ಪಲ್ಯ ಮಾಡುವ ವಿಶಿಷ್ಟ ಸಂಪ್ರದಾಯ ಇಂದಿಗೂ ಜೀವಂತವಾಗಿದೆ.
ಮಾವಿನ ಹಣ್ಣು ತಿಂದ ಬಳಿಕ ಗೊರಟೆಯನ್ನು ಸಂಗ್ರಹಿಸಿ, ನೀರಿನಲ್ಲಿ ಬೇಯಿಸಬೇಕು. ಅಥವಾ ಒದ್ದೆ ಬಟ್ಟೆಯಲ್ಲಿ ಸುತ್ತಿ ಮೂರ್ನಾಲಕ್ಉ ದಿನ ಇಡಬೇಕು. ಅದರೆ ಗಟ್ಟಿಯಾದ ಪದರ ಬಿಟ್ಟಕೊಂಡ ಬಳಿಕ ಅದನ್ನ ತುರಿಸದು ಅಥವಾ ಚಿಕ್ಕದಾಗಿ ತುಂಡು ಮಾಡಿಕೊಳ್ಳಬೇಕು. ಬಳಿಕ ಉಪ್ಪು ಸೇರಿಸಿ ಒಂದು ಕುದಿ ಬೇಯಿಸಿ ಚೆನ್ನಾಗಿ ತೊಳೆದು ಅದಕ್ಕೆ ತೆಂಗಿನ ತುರಿ, ಮೆಣಸಿನಕಾಯಿ, ಸಾಸಿವೆ ಮತ್ತು ಇತರ ಮಸಾಲೆಗಳನ್ನು ಸೇರಿಸಿ ರುಚಿಕರವಾದ ಪಲ್ಯ ತಯಾರಿಸುತ್ತಿದ್ದರು. ಸಿಹಿ, ಹುಳಿ ಮತ್ತು ಖಾರದ ಸಮ್ಮಿಲನ ಈ ಪಲ್ಯದ ವಿಶೇಷ ರುಚಿ.
ಈ ಪಲ್ಯ ಕೇವಲ ಒಂದು ಖಾದ್ಯವಲ್ಲ. ಅದು ನಮ್ಮ ಹಿರಿಯರ ಮಿತವ್ಯಯ ಮತ್ತು ಪ್ರಕೃತಿಯ ಕೊಡುಗೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಜೀವನಶೈಲಿಯ ಪ್ರತೀಕವಾಗಿದೆ. ಇಂದಿನ ಆಹಾರ ವ್ಯರ್ಥವಾಗದಿರಲಿ ಎಂಬ ಸಂದೇಶವನ್ನು ನಮ್ಮ ಪೂರ್ವಜರು ಬಹಳ ಹಿಂದೆಯೇ ತಮ್ಮ ಅಡುಗೆಯಲ್ಲಿ ಅಳವಡಿಸಿಕೊಂಡಿದ್ದರು.
ಬೇಸಿಗೆಯ ದಿನಗಳಲ್ಲಿ ಮನೆಯಂಗಳದಲ್ಲಿ ಕುಳಿತು ಮಾವಿನ ಹಣ್ಣು ಸವಿಯುವಾಗ ಉಳಿಯುವ ಗೊರಟೆಯನ್ನು ಕಸದ ಬುಟ್ಟಿಗೆ ಎಸೆಯದೆ ರುಚಿಯಾದ ಪಲ್ಯವಾಗಿ ಪರಿವರ್ತಿಸುವ ಕಲೆಯೇ ಗ್ರಾಮೀಣ ಅಡುಗೆಯ ಸೊಬಗು. ಸರಳ ಪದಾರ್ಥಗಳಿಂದ ಸವಿಯಾದ ಖಾದ್ಯ ಸೃಷ್ಟಿಸುವ ಈ ಸಂಪ್ರದಾಯ, ನಮ್ಮ ಜನಪದ ಆಹಾರ ಸಂಸ್ಕೃತಿಯ ಶ್ರೀಮಂತಿಕೆಯನ್ನು ಸಾರುತ್ತದೆ.