ಕoಠಪೂರ್ತಿ ಸರಾಯಿ ಕುಡಿದ ಕುಮಟಾದ ಮಹಿಳೆಯೊಬ್ಬರು ರಾತ್ರಿ ವೇಳೆ ಯಲ್ಲಾಪುರ ಬಸ್ ನಿಲ್ದಾಣದಲ್ಲಿ ರಂಪಾಟ ಮಾಡಿದ್ದು, ಪೊಲೀಸರು ಆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮದ್ಯದ ನಶೆಯಿಳಿದ ಬಳಿಕ ಆಕೆಯನ್ನು ಕುಮಟಾದ ಮನೆಗೆ ಮುಟ್ಟಿಸಿದ್ದು, ಅದಾದ ನಂತರ `ಮಹಿಳೆಯ ಗುರುತು ಪತ್ತೆಗೆ ಮನವಿ’ ಎಂಬ ಸಂದೇಶ ವೈರಲ್ ಆಗಿದೆ. ಆ ಮಹಿಳೆ ಸುರಕ್ಷಿತವಾಗಿ ಮನೆ ಸೇರಿದ್ದು, ವೈರಲ್ ಆದ ಸಂದೇಶದ ಪ್ರಭಾವದಿಂದ ಮಹಿಳೆ ಮನೆಯಿಂದ ಹೊರಬರಲಾಗದ ಸಮಸ್ಯೆಗೆ ಸಿಲುಕಿದ್ದಾರೆ!
ದಾವಣಗೆರೆ ಮೂಲದ ಸಹನಾ ಭಾನು (ಹೆಸರು ಬದಲಿಸಿದೆ) ಅವರು ಕುಮಟಾದ ಹೆಗಡೆಯಲ್ಲಿ ವಾಸವಾಗಿದ್ದಾರೆ. ಅಗರಬತ್ತಿ ಮಾರಾಟ ಮಾಡುವ ಮೂಲಕ ಅವರು ಬದುಕು ಕಂಡುಕೊAಡಿದ್ದಾರೆ. ಊರುರು ಅಲೆದಾಡಿ ಅಗರಬತ್ತಿ ಮಾರುವ ಅವರು ಶಿರಸಿ-ಸಿದ್ದಾಪುರ ಸೇರಿ ವಿವಿಧ ಕಡೆ ಸಂಚರಿಸಿ, ಬುಧವಾರ ಯಲ್ಲಾಪುರಕ್ಕೆ ಆಗಮಿಸಿದ್ದಾರೆ. ಆ ರಾತ್ರಿ ಸಹನಾ ಭಾನು ಅವರು ಮದ್ಯ ಸೇವಿಸಿದ್ದು ಬಸ್ ನಿಲ್ದಾಣದಲ್ಲಿ ಕುಣಿದಾಡಿದ್ದಾರೆ. ಮಹಿಳೆಯ ವಿಚಿತ್ರ ವರ್ತನೆ ನೋಡಿದ ಜನ ಪೊಲೀಸರಿಗೆ ಫೋನ್ ಮಾಡಿದ್ದಾರೆ.
ತಕ್ಷಣ ಅಲ್ಲಿಗೆ ಬಂದ ಪೊಲೀಸರು ಮಹಿಳೆಯನ್ನು ವಿಚಾರಣೆಗೊಳಪಡಿಸಿದ್ದಾರೆ. ಆದರೆ, ಕುಮಟಾ ಎನ್ನುವುದನ್ನು ಬಿಟ್ಟು ಬೇರೆ ಯಾವ ಶಬ್ದವನ್ನು ಬಾಯ್ಬಿಡಿಸಲು ಸಾಧ್ಯವಾಗಿಲ್ಲ. `ತಾನೂ ಮೇಜರ್’ ಎಂಬ ಮಾತನ್ನು ಮಾತ್ರ ಆ ಮಹಿಳೆ ಪದೇ ಪದೇ ಹೇಳಿದ್ದು, ಅವರ ವಿಳಾಸ ಪತ್ತೆ ಮಾಡುವುದು ಪೊಲೀಸರಿಗೂ ಸವಾಲಾಗಿದೆ. ಅದಾದ ನಂತರ ಮಹಿಳೆ ಬಳಿ ಶಿರಸಿ-ಯಲ್ಲಾಪುರ ಬಸ್ ಟಿಕೆಟ್ ಸಿಕ್ಕಿದ್ದು, ಅಗರಬತ್ತಿ ಮಾರಾಟ ಮಾಡಿ ಜೀವನ ನಡೆಸುತ್ತಿರುವ ವಿಷಯವೂ ಗೊತ್ತಾಗಿದೆ. ಅದಾದ ನಂತರ ಪೊಲೀಸರು ಆ ಮಹಿಳೆಯ ಗುರುತು ಪತ್ತೆಗೆ ಕುಮಟಾ ಪೊಲೀಸ್ ಠಾಣೆ ಸಂಪರ್ಕಿಸಿದ್ದು, ಅಲ್ಲಿನ ಮಾಹಿತಿ ಆಧರಿಸಿ ಮಹಿಳೆಯ ಹೆಸರು-ವಿಳಾಸ ಪತ್ತೆ ಮಾಡಿದ್ದಾರೆ. ನಶೆ ಇಳಿದ ನಂತರ ಆ ಅವರನ್ನು ಊರಿಗೆ ಕಳುಹಿಸುವ ತಯಾರಿ ಮಾಡಿದ್ದಾರೆ. ಮದ್ಯದ ನಶೆಯಿಳಿದ ನಂತರ ಪೊಲೀಸರೇ ಮುತುವರ್ಜಿಯಿಂದ ಮಹಿಳೆಯನ್ನು ಮನೆಗೂ ಕಳುಹಿಸಿದ್ದಾರೆ.
ಈ ವೇಳೆ ಸಹನಾ ಭಾನು ಅವರ ಫೋಟೋ ಸಾಮಾಜಿಕ ಜಾಲತಾಣದ ವೀರರಿಗೆ ಸಿಕ್ಕಿದೆ. ಗುರುವಾರ ರಾತ್ರಿಯೊಳಗೆ ಆ ಮಹಿಳೆ ಮನೆ ಸೇರಿದ್ದು, ಅವರು ಮನೆ ಮುಟ್ಟಿದ 30 ನಿಮಿಷದ ನಂತರ ಖಾಸಗಿ ಫೋನ್ ಸಂಖ್ಯೆಯೊAದಿಗೆ ಮಹಿಳೆಯ ಫೋಟೋ ವೈರಲ್ ಆಗಿದೆ. ಸತ್ಯಾತ್ಯತೆ ಪರಿಶೀಲಿಸದ ಜನ ಮಹಿಳೆಯ ಫೋಟೋ ಜೊತೆ ಆಕೆಯ ಬಗ್ಗೆ ಮಾಹಿತಿ ಕೊಡುವಂತೆ ವ್ಯಕ್ತಿಯೊಬ್ಬರ ಫೋನ್ ನಂ ಜೊತೆ ವಿಷಯವನ್ನು ವೈರಲ್ ಮಾಡಿದ್ದಾರೆ. ಆದರೆ, ಆ ಫೋಟೋ-ಪ್ರಕಟಣೆಯನ್ನು ಪೊಲೀಸರು ಹೊರಡಿಸಿಲ್ಲ. ಮಹಿಳೆಯ ಸಂಬoಧಿಕರು ಸಹ ಅವರ ಪತ್ತೆಗೆ ಮನವಿ ಮಾಡಿಲ್ಲ. ಸಂಬoಧವೇ ಇಲ್ಲದವರು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ಫೋಟೋ ವೈರಲ್ ಮಾಡುತ್ತಲೇ ಇದ್ದು, ಅವರು ಮನೆ ಮುಟ್ಟಿ ದಿನ ಕಳೆದರೂ ಸಂದೇಶ ಹರಿದಾಡುವುದು ಮಾತ್ರ ನಿಂತಿಲ್ಲ.