ಅಂಕೋಲಾದ ಹೆಗ್ಗಾರ್ ಮಕ್ಕಿಗದ್ದೆಯ ಕೀರಾ ಹರಿಕಂತ್ರ ಅವರ ನಿಧನದ ನಂತರ ಅವರ ಪತ್ನಿ ಗೌರಿ ಹರಿಕಂತ್ರ ಹಾಗೂ ಮಗಳು ನಯನಾ ಹರಿಕಂತ್ರ ಅವರು ಸಮಸ್ಯೆಗೆ ಸಿಲುಕಿದ್ದಾರೆ. ಕೀರಾ ಹರಿಕಂತ್ರ ಅವರ ಮಗ ನಿತಿನ್ ಹರಿಕಂತ್ರ ಅವರೇ ತಾಯಿ ಹಾಗೂ ತಂಗಿಗೆ ಹಿಂಸೆ ನೀಡುತ್ತಿದ್ದಾರೆ.
ಅಂಕೋಲಾದ ಹೆಗ್ಗಾರ್ ಮಕ್ಕಿಗದ್ದೆಯಲ್ಲಿ ಕೀರಾ ಹರಿಕಂತ್ರ ಅವರು ವಾಸವಾಗಿದ್ದರು. ಪತ್ನಿ-ಮಕ್ಕಳ ಜೊತೆ ಅವರು ಅನ್ಯೋನ್ಯವಾಗಿದ್ದರು. ಹೀಗಿರುವಾಗ ಕೀರಾ ಹರಿಕಂತ್ರ ಅವರು ದಿಢೀರ್ ಆಗಿ ನಿಧನರಾಗಿದ್ದು, ಅವರ ಮಗ ನಿತಿನ್ ಹರಿಕಂತ್ರ ಅವರೇ 15 ಲಕ್ಷ ರೂ ಹಣಕ್ಕಾಗಿ ತಾಯಿ ಹಾಗೂ ತಂಗಿಯನ್ನು ಕಾಡಿಸಲು ಶುರು ಮಾಡಿದರು. ಅಣ್ಣನ ಕಾಟ ಸಹಿಸಲಾಗದ ತಂಗಿ ನಯನಾ ಹರಿಕಂತ್ರ ಅವರು ಉಡುಪಿಗೆ ಹೋಗಿ ಕಾಲೇಜು ಸೇರಿದರು. ಅವರ ತಾಯಿ ದೊಡ್ಡಮ್ಮನ ಮನೆಗೆ ಹೋಗಿ ಆಶ್ರಯಪಡೆದರು.
ಹೀಗಿರುವಾಗ, ಮೇ 26ರಂದು ಕಾಲೇಜಿಗೆ ರಜೆಯಿದ್ದ ಕಾರಣ ನಯನಾ ಹರಿಕಂತ್ರ ಅವರು ಊರಿಗೆ ಬಂದಿದ್ದರು. ದೊಡ್ಡಮ್ಮನ ಮನೆಗೆ ಹೋಗಿದ್ದ ತಾಯಿ ಗೌರಿ ಹರಿಕಂತ್ರ ಅವರನ್ನು ಕರೆದುಕೊಂಡು ತಮ್ಮ ಮನೆಗೆ ಹೋಗುವ ಪ್ರಯತ್ನ ಮಾಡಿದ್ದರು. ಅತ್ತಿಗೆ-ಮಕ್ಕಳ ಜೊತೆ ವಾಸವಾಗಿದ್ದ ಅಣ್ಣ ನಿತಿನ್ ಹರಿಕಂತ್ರ ಅವರ ಸ್ವಭಾವ ಅರಿವಿದ್ದರೂ ಅಲ್ಲಿಗೆ ಹೋಗಿದ್ದ ನಯನಾ ಹರಿಕಂತ್ರ ಅವರು ಅಡುಗೆ ಮಾಡುವ ಪಾತ್ರೆ ಮುಟ್ಟಿದ್ದರು. ಮನೆಯಲ್ಲಿದ್ದ ಅಡುಗೆ ಪಾತ್ರೆ ತೆಗೆದುಕೊಂಡ ವಿಷಯ ಕೇಳಿ ಅಲ್ಲಿ ದೌಡಾಯಿಸಿದ ನಿತಿನ್ ಹರಿಕಂತ್ರ ಅವರು ನಯನಾ ಹರಿಕಂತ್ರ ಅವರನ್ನು ಕೆಟ್ಟದಾಗಿ ನಿಂದಿಸಿದರು. ಅಂಗಳದಲ್ಲಿಯೇ ಅಡ್ಡಗಟ್ಟಿ ತಾಯಿಗೂ ಸಹ ಅಶ್ಲೀಲವಾಗಿ ಬೈದರು. ಅದಾದ ನಂತರ ಅಲ್ಲಿದ್ದ ಬೇಲಿ ಗೂಟದಿಂದ ನಯನಾ ಹರಿಕಂತ್ರ ಅವರಿಗೆ ಹೊಡೆದರು. ಮನೆ ಸಾಮಾನು ಉಪಯೋಗಿಸಿದರೆ ಕೊಲೆ ಮಾಡುವುದಾಗಿಯೂ ಬೆದರಿಸಿದರು.
ಈ ಅನ್ಯಾಯ ಸಹಿಸದ ನಯನಾ ಹರಿಕಂತ್ರ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದರು. ಅಂಕೋಲಾ ಪೊಲೀಸರ ಬಳಿ ತಮಗಾದ ಅನ್ಯಾಯ ವಿವರಿಸಿ, ನ್ಯಾಯಕ್ಕಾಗಿ ಮನವಿ ಮಾಡಿದರು.