ಯಲ್ಲಾಪುರ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆಗಾಗಿ ಬೊಮ್ಮನಳ್ಳಿಯಿಂದ ಪೈಪ್ ಅಳವಡಿಸಲಾಗಿದ್ದು, ಕಣ್ಣಿಗೇರಿಯಲ್ಲಿ ರಸ್ತೆ ಅಗೆದು ಪೈಪ್ ಹಾಕಲಾಗಿದೆ. ರಸ್ತೆ ಅಗದ ಜಾಗದಲ್ಲಿ ಕಂದಕವಾಗಿದ್ದರಿoದ ಭಾನುವಾರ ಅಲ್ಲಿ ಬಸ್ಸೊಂದು ಸಿಕ್ಕಿಬಿದ್ದಿದೆ.
ಕುಡಿಯುವ ನೀರಿನ ಯೋಜನೆಗಾಗಿ ಪೈಪ್ ಅಳವಡಿಸಿದವರು ಪೈಪಿನ ಮೇಲೆ ಗಟ್ಟಿಯಾಗಿ ಮಣ್ಣು ಸುರಿದಿಲ್ಲ. ಅದರಿಂದ ರಸ್ತೆ ಬಿಟ್ಟು ಪಕ್ಕಕ್ಕೆ ಹೋಗುವ ವಾಹನಗಳು ಎರಡು ಅಡಿ ಆಳಕ್ಕೆ ಹೋಗುತ್ತಿದೆ. ಕಣ್ಣಿಗೇರಿ ಬಳಿ ರಸ್ತೆಯನ್ನೇ ಅಗೆದು ಪೈಪ್ ಅಳವಡಿಸಲಾಗಿದೆ. ಅಲ್ಲಿಯೂ ಸಹ ರಸ್ತೆ ನಡುವೆ ಹೊಂಡ ತೋಡಿದವರು ಸರಿಯಾಗಿ ಮಣ್ಣು ಮುಚ್ಚಿಲ್ಲ. ಹೀಗಾಗಿ ಮಳೆ ಬಂದಾಗ ಮಣ್ಣು ಇನ್ನಷ್ಟು ಆಳಕ್ಕೆ ಇಳಿದಿದ್ದು, ವಿವಿಧ ವಾಹನಗಳು ಅಲ್ಲಿ ಸಿಕ್ಕಿ ಬೀಳುತ್ತಿವೆ.
ಭಾನುವಾರ ಬೆಳಗ್ಗೆ ಯಲ್ಲಾಪುರದಿಂದ ವಡೆಹೊಕ್ಕಳ್ಳಿ ಮಾರ್ಗವಾಗಿ ಸರ್ಕಾರಿ ಬಸ್ಸು ಹೊರಟಿತ್ತು. ಈ ಬಸ್ಸಿನಲ್ಲಿ ಸುಮರು 20 ಪ್ರಯಾಣಿಕರು ಇದ್ದರು. ಆ ಬಸ್ಸು ಕಣ್ಣಿಗೇರಿ ಪ್ರವೇಶಿಸಿ ಮುಂದೆ ಹೋದಾಗ ರಸ್ತೆ ನಡುವಿನ ಹೊಂಡದಲ್ಲಿ ಸಿಕ್ಕಿಬಿದ್ದಿತು. ಎಷ್ಟೇ ಪ್ರಯತ್ನ ಮಾಡಿದರೂ ಬಸ್ಸು ಮುಂದೆ ಸಾಗಲಿಲ್ಲ. ಇದರಿಂದ ಪ್ರಯಾಣಿಕರು ಸಮಸ್ಯೆ ಅನುಭವಿಸಿದ್ದು, ನಂತರ ಬೇರೆ ಬೇರೆ ವಾಹನಗಳನ್ನು ಅವಲಂಭಿಸಿ ಊರು ಸೇರಿದರು.
ಅದಾದ ನಂತರ ಶಿರಸಿಯಿಂದ ಕ್ರೇನ್ ತರಿಸಿ ಬಸ್ಸನ್ನು ಮೇಲೆತ್ತಲಾಯಿತು. ಜೆಸಿಬಿ ಯಂತ್ರಗಳನ್ನು ಬಳಸಲಾಯಿತು. ಕುಡಿಯುವ ನೀರಿನ ಯೋಜನೆಗಾಗಿ ರಸ್ತೆ ಅಗೆದವರು ಪೈಪ್ ಅಳವಡಿಕೆ ನಂತರ ರಸ್ತೆ ಸರಿಪಡಿಸಿಲ್ಲ. ರಸ್ತೆ ಅಂಚಿಗೆ ಸಹ ಪೈಪ್ ಅಳವಡಿಸಿ ಸರಿಯಾಗಿ ಮಣ್ಣು ಭರ್ತಿ ಮಾಡಿಲ್ಲ. ಪರಿಣಾಮ ಜನ ಸಾಮಾನ್ಯರು ಸಮಸ್ಯೆ ಅನುಭವಿಸುತ್ತಿದ್ದು, ಜನರ ಸಮಸ್ಯೆ ಆಲಿಸುವವರಿಲ್ಲ.