ಕುಮಟಾ ಪ್ರಸಿದ್ಧ ಕಾಂಚಿಕಾ ಪರಮೇಶ್ವರಿ ದೇವಾಲಯ ಬಳಿಯಿರುವ ಕಲ್ಯಾಣಿ ಕೆರೆ ಗಬ್ಬೆದ್ದಿದ್ದು, ಅದೇ ಕೆರೆಯಿಂದ ಬಾಡ ಗ್ರಾಮ ಪಂಚಾಯತ ಅಧಿಕಾರಿಗಳು `ನಿಧಿ’ ತೆಗೆಯುತ್ತಿದ್ದಾರೆ. ಕುಡಿಯಲು ಯೋಗ್ಯವಾಗಿರದ ಕಲ್ಯಾಣಿ ಕೆರೆಯ ನೀರನ್ನು ಜನರಿಗೆ ಕುಡಿಸಿರುವುದಾಗಿ ದಾಖಲೆ ಸೃಷ್ಠಿಸಿ `ಬಿಲ್ ವಿದ್ಯೆ’ ಪ್ರಯೋಗ ಮಾಡಿದ್ದಾರೆ.
ಕುಮಟಾ ಬಾಡದ ಅರಬ್ಬಿ ಸಮುದ್ರದ ಅಂಚಿನಲ್ಲಿ ಗುಡ್ಡದ ತಪ್ಪಲಿನಲ್ಲಿ ಕಾಂಚಿಕಾ ಪರಮೇಶ್ವರಿ ದೇವಾಲಯವಿದೆ. ನಂಬಿದ ಭಕ್ತರಿಗೆ ಈ ದೇವಿ ಸಕಲ ರೀತಿಯಲ್ಲಿಯೂ ಒಳ್ಳೆಯದನ್ನು ಮಾಡುತ್ತ ಬಂದಿದ್ದು, ಲಕ್ಷಾಂತರ ಭಕ್ತರು ಈ ದೇವಿಗೆ ಶೃದ್ಧೆಯಿಂದ ನಡೆದುಕೊಳ್ಳುತ್ತಾರೆ. ಈ ದೇಗುಲದ ಅನತಿ ದೂರದಲ್ಲಿ ಪುಟ್ಟ ಕಲ್ಯಾಣಿಯಿದೆ. ಆ ಕಲ್ಯಾಣಿಯ ನೀರು ಕಲುಷಿತವಾಗಿದ್ದು, ದೇಗುಲದ ಯಾವ ಕೆಲಸಕ್ಕೂ ಅದನ್ನು ಬಳಸುತ್ತಿಲ್ಲ. ಆದರೆ, ದೇವಾಲಯದ ಆಸ್ತಿಯಾದ ಆ ಕಲ್ಯಾಣಿಯನ್ನು ಅಭಿವೃದ್ದಿಪಡಿಸಲು ಬಾಡ ಗ್ರಾಮ ಪಂಚಾಯತದವರು ಕ್ರಿಯಾ ಯೋಜನೆ ಮಾಡಿದ್ದಾರೆ. ಆದರೆ, ಅಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಹಣ ಹೊಡೆದಿದ್ದಾರೆ.
ಕಲ್ಯಾಣಿ ಕೆರೆಯ ಸುತ್ತಲಿನ ಕಟ್ಟೆಗೆ ಈ ವರ್ಷ ಅರ್ದ ಚೀಲ ಸಿಮೆಂಟ್ ಬಳಸಿ ತೇಪೆ ಹಚ್ಚಲಾಗಿದೆ. ಆ ಸಿಮೆಂಟ್ ಕೆಲಸಕ್ಕೆ ಮರಳನ್ನು ಸಹ ಬಳಸಿದ ಕುರುಹುಗಳಿಲ್ಲ. ಅದಾಗಿಯೂ, ಈ ಒಂದೇ ಕೆಲಸಕ್ಕೆ 95 ಸಾವಿರ ರೂಪಾಯಿ ಹಣ ಖರ್ಚು ಮಾಡಲಾಗಿದೆ. 15ನೇ ಹಣಕಾಸು ಯೋಜನೆ ಅಡಿ ಎರಡು ಕಂತಿನಲ್ಲಿ ಹಣ ಖರ್ಚು ಮಾಡಲಾಗಿದೆ. ಬಾಡ ಗ್ರಾಮ ಪಂಚಾಯತದ ಅನೇಕ ಕಾಮಗಾರಿಗಳ ಹಣ ನಾರಾಯಣ ಪಟಗಾರ ಎಂಬಾತರ ಖಾತೆಗೆ ಜಮಾ ಆಗಿದ್ದು, ಕಲ್ಯಾಣಿ ಕೆರೆಯ ಹೆಸರಿನಲ್ಲಿಯೂ ಅವರ ಬ್ಯಾಂಕ್ ಖಾತೆಗೆ ಅಧಿಕಾರಿಗಳು ಹಣ ವರ್ಗಾಯಿಸಿದ್ದಾರೆ. ಕಲ್ಯಾಣಿ ಕೆರೆಗಾಗಿ ನೂರು ರೂ ಸಹ ಖರ್ಚು ಮಾಡದೇ 96 ಸಾವಿರ ರೂ ಲಪಟಾಯಿಸಲಾಗಿದೆ. ಇದರೊಂದಿಗೆ ಇನ್ನೂ ಅನೇಕ ಕಾಮಗಾರಿಗಳ ಹೆಸರಿನಲ್ಲಿ ನಾರಾಯಣ ಪಟಗಾರ ಎಂಬಾತರ ಬ್ಯಾಂಕ್ ಖಾತೆಗೆ ತುಂಡು ತುಂಡಾಗಿ ಲಕ್ಷಾಂತರ ರೂ ಪಾವತಿಯಾಗಿದೆ.
ಕಲ್ಯಾಣಿ ಕೆರೆ ಮಾರ್ಗವಾಗಿ ಎಲ್ಲಿಯೂ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ಎಷ್ಟೇ ಆಳಕ್ಕೆ ಅಗೆದರೂ ಕಲ್ಯಾಣಿ ಕೆರೆ ಮಾರ್ಗವಾಗಿ ಪೈಪ್ ಲೈನ್ ಸಿಗುವುದಿಲ್ಲ. ಅದಾಗಿಯೂ, ವಾರಕ್ಕೆ 2-3 ಸಲ ಪೈಪ್ ಲೈನ್ ದುರಸ್ಥಿ ಹೆಸರಿನ ಅಡಿ ನೀರು ಬಿಡುವ ಕಾರ್ಮಿಕ ವಿನಾಯಕ ನಾಯ್ಕ ಎಂಬಾತರ ಖಾತೆಗೆ ಹಣ ಜಮಾ ಆಗುತ್ತಿದೆ. ಕಳೆದ ಕೆಲ ವರ್ಷಗಳಿಂದ ವಿನಾಯಕ ನಾಯ್ಕ ಅವರ ಬ್ಯಾಂಕ್ ಖಾತೆಗೆ ಪದೇ ಪದೇ ಹಣ ವರ್ಗವಣೆಯಾದ ದಾಖಲೆಗಳಿವೆ. ನಿನ್ನೆ-ಮೊನ್ನೆಯವರೆಗೂ ಪಿಡಿಓ ಕಮಲಾ ಹರಿಕಂತ್ರ ಹಾಗೂ ಗ್ರಾಮ ಪಂಚಾಯತ ಆಡಳಿತಾಧಿಕಾರಿ ಮೀನಾಕ್ಷಿ ಮಾಸ್ತಿಮನೆ ಅವರ ಮುತುವರ್ಜಿಯಿಂದಾಗಿ ಬೇಕಾಬಿಟ್ಟಿ ಹಣ ಪಾವತಿ ಕಾರ್ಯ ನಡೆದಿದೆ. ಸಿಬ್ಬಂದಿ ವೇತನಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವ ಕಾರ್ಮಿಕನ ಖಾತೆಗೆ ಅನುಮಾನಾಸ್ಪದ ರೀತಿಯಲ್ಲಿ ಹಣ ವರ್ಗವಾಗಿದೆ.
ಲಕ್ಷಕ್ಕೂ ಅಧಿಕ ಮೊತ್ತದ ಕಾಮಗಾರಿ ನಡೆಸಬೇಕಾದರೆ ಟೆಂಡರ್ ಕರೆಯುವುದು ಕಡ್ಡಾಯವಾಗಿದ್ದು, ಟೆಂಡರ್ ಕರೆಯುವುದನ್ನು ತಪ್ಪಿಸುವುದಕ್ಕಾಗಿಯೇ ಅಧಿಕಾರಿಗಳು ಸಣ್ಣ ಸಣ್ಣ ಕಾಮಗಾರಿಗಳ ಹೆಸರಿನಲ್ಲಿ ದೊಡ್ಡ ಮೊತ್ತ ಖರ್ಚು ಮಾಡುತ್ತಿದ್ದಾರೆ. ಕಲ್ಯಾಣಿ ಕೆರೆ ಅಭಿವೃದ್ಧಿಗಾಗಿ ಎರಡು ಕಂತಿನಲ್ಲಿ 95 ಸಾವಿರ ರೂ ಹಣ ಪಾವತಿ ನಡೆದಿದ್ದು, ಪೈಪ್‌ಲೈನ್ ದುರಸ್ಥಿ ನೆಪದಲ್ಲಿ 2 ಸಾವಿರ ರೂಪಾಯಿಗಳಿಂದ 6800ರೂಪಾಯಿಗಳವರೆಗೆ ಪದೇ ಪದೇ ಹಣ ವರ್ಗಾವಣೆ ನಡೆದಿದೆ. ಬಾಡ ಗ್ರಾಮ ಪಂಚಾಯತದಿoದ ಕುಡಿಯುವ ನೀರು ಸರಬರಾಜು ಹಾಗೂ ಪೈಪ್‌ಲೈನ್ ದುರಸ್ತಿ ಹೆಸರಿನಲ್ಲಿ ಪದೇ ಪದೇ ಹಣ ಖರ್ಚಾಗಿರುವುದು ಸಾಕಷ್ಟು ಅನುಮಾನ ಮೂಡಿಸಿದೆ. ಗ್ರಾಮ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷರ ಆಡಳಿತ ಅವಧಿ ಮುಗಿದ ನಂತರ ಅಧಿಕಾರಿಗಳ ಆಡಳಿತದಲ್ಲಿ ಅನೇಕ ಬಾರಿ ಹಣ ವರ್ಗಾವಣೆ ನಡೆದಿದೆ.