ಸೂಪರ್ ಮಾರ್ಟಿನಲ್ಲಿ ಕೆಲಸ ಮಾಡುವ ಭಟ್ಕಳ ಕಾರಗದ್ದೆಯ ಶಾಹೀದ್ ಖಾನ್ ಅವರು ಅದೇ ಸೂಪರ್ ಮಾರ್ಟಿನ ಹಿಂದೂ ಯುವತಿಯನ್ನು ಕಾರಿನಲ್ಲಿ ಕರೆದೊಯ್ದು ಅನುಚಿತವಾಗಿ ವರ್ತಿಸಿದ್ದು, ಹಿಂದೂ ಮುಖಂಡರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ಈ ವೇಳೆ ಹನುಮಾನ ನಗರದ ಗೋವಿಂದ ನಾಯ್ಕ ಅವರು ದ್ವೇಷ ಭಾಷಣ ಮಾಡಿದ್ದು, ಅದರಿಂದ ಆಗಬಹುದಾದ ಇನ್ನಷ್ಟು ದೊಡ್ಡ ಪ್ರಮಾಣದ ಗಲಾಟೆಯನ್ನು ಪೊಲೀಸರು ತಪ್ಪಿಸಿದ್ದಾರೆ.
Advertisement. Scroll to continue reading.
ಜೂನ್ 17ರಂದು ಶಾಹೀದ್ ಖಾನ್ ಅವರು ಯುವತಿಯೊಬ್ಬರನ್ನು ಮಾತನಾಡುವುದಕ್ಕೆ ಆಮಂತ್ರಿಸಿದ್ದರು. ಆ ಯುವತಿ ಆಗಮಿಸಿದಾಗ ಬಲವಂತವಾಗಿ ಅವರನ್ನು ಕಾರಿನಲ್ಲಿ ಕೂರಿಸಿದ್ದರು. ಮಾರುಕೇರಿ ಗ್ರಾಮದಿಂದ ಶಿರಾಲಿ ಚಿತ್ರಾಪುರದ ಗಡೆಹಬ್ಬದ ಕಡೆ ಹೋಗುತ್ತಿದ್ದ ಕಾರು ಮಣ್ಣಿನ ರಾಡಿಯಲ್ಲಿ ಸಿಕ್ಕಿಬಿದ್ದಿತ್ತು. ಅಲ್ಲಿದ್ದ ಜನ ಕಾರನ್ನು ಎತ್ತಿ ಪಕ್ಕದಲ್ಲಿರಿಸಿದ್ದು, ಒಳಗಿದ್ದವರ ಬಗ್ಗೆ ವಿಚಾರಿಸಿದ್ದರು. ಆಗ, ಹಿಂದು ಯುವತಿಯನ್ನು ಮುಸ್ಲಿಂ ಯುವಕ ಒತ್ತಾಯಪೂರ್ವಕವಾಗಿ ಕಾರಿನಲ್ಲಿ ಕರೆತಂದಿರುವುದು ಗೊತ್ತಾಗಿತ್ತು. ಸಿಟ್ಟಾದ ಕುಮಾರ ನಾಯ್ಕ ಹಾಗೂ ಶ್ರೀಕಾಂತ ನಾಯ್ಕ ಅವರು ಶಾಹೀದ್ ಖಾನ್ ಅವರ ಮೇಲೆ ಕೈ ಮಾಡಿದ್ದರು.
ಕೈ ಮಾಡಿದವರ ವಿರುದ್ಧ ಶಾಹೀದ್ ಖಾನ್ ಪೊಲೀಸ್ ಪ್ರಕರಣ ದಾಖಲಿಸಿದ್ದರು. ಶಾಹೀದ್ ಖಾನ್ ನೀಡಿದ ಹಿಂಸೆಯ ಬಗ್ಗೆ ಯುವತಿ ಸಹ ಪೊಲೀಸ್ ದೂರು ನೀಡಿದ್ದರು. ಹಿಂದೂ ಕಾರ್ಯಕರ್ತರ ವಿರುದ್ಧ ದಾಖಲಾದ ದೂರಿನ ಸುದ್ದಿ ಕೇಳಿ ಅನೇಕರು ಪೊಲೀಸ್ ಠಾಣೆಗೆ ಜಮಾಯಿಸಿ ಪ್ರತಿಭಟಿಸಿದ್ದರು. ಈ ವೇಳೆ ಗೋವಿಂದ ನಾಯ್ಕ ಅವರು ಪೊಲೀಸರನ್ನು ನಿಂದಿಸಿ ಭಾಷಣ ಮಾಡಿದ್ದರು. ಜೊತೆಗೆ ಮುಸ್ಲಿಂ ಸಮುದಾಯದ ವಿರುದ್ಧ ಪ್ರಚೋದನಾಕಾರಿ ಮಾತುಗಳನ್ನಾಡಿದ್ದರು. ಹೀಗಾಗಿ ಭಟ್ಕಳ ಪಿಐ ನೀಡಿದ ದೂರಿನ ಅನ್ವಯ ಗೋವಿಂದ ನಾಯ್ಕ ಅವರ ವಿರುದ್ಧವೂ ಪೊಲೀಸರು ಕೇಸು ದಾಖಲಿಸಿದ್ದರು.
ಈ ಎಲ್ಲಾ ಬೆಳವಣಿಗೆ ನಂತರ ಶಾಂತಿ-ಸುವ್ಯವಸ್ಥೆ ದೃಷ್ಠಿಯಿಂದ ಭಟ್ಕಳಲ್ಲಿ ಇನ್ನಷ್ಟು ಸಮಸ್ಯೆಯಾಗುವ ಸಾಧ್ಯತೆಯಿದ್ದು, ಜಾಲತಾಣಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುವ ಪೋಸ್ಟ್ ಬಾರದಂತೆ ಎಚ್ಚರವಹಿಸಿದ್ದರು. ಸದ್ಯ ಪೊಲೀಸರು ಮತ್ತೊಮ್ಮೆ ಜಾಲತಾಣದ ಶೂರರಿಗೆ ಎಚ್ಚರಿಕೆ ನೀಡಿದ್ದು, ಕೋಮು ಪ್ರಚೋದನೆ ಸಂದೇಶ ಕಳುಹಿಸಿದರೆ ಕಠಿಣ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.