ಮುಂಡಗೋಡಿನ ಹೆಸ್ಕಾಂ ಅಧಿಕಾರಿ ಧರ್ಮರಾಜ ಬೆಡಸಗಾಂವ್ ಅವರು 65 ಸಾವಿರ ರೂಪಾಯಿಗೆ ಮಾರಾಟವಾಗಿದ್ದಾರೆ. ಗುತ್ತಿಗೆದಾರ ಶಿವಯೋಗಿ ಕೂಡಲಮಠ ಅವರಿಂದ ಲಂಚ ಸ್ವೀಕರಿಸಿ ಅವರು ಜೈಲು ಸೇರಿದ್ದಾರೆ.
ಮುಂಡಗೋಡಿನ ಹೆಸ್ಕಾಂ ಕಚೇರಿಯಲ್ಲಿ ಧರ್ಮರಾಜ ಬೆಡಸಗಾಂವ್ ಅವರು AEE ಆಗಿದ್ದರು. ಕೈ ತುಂಬ ಸಂಬಳ ಬರುತ್ತಿದ್ದರೂ ಅವರು ಎಂಜಲು ಕಾಸಿಗೆ ಆಸೆಪಡುತ್ತಿದ್ದರು. ಮುಂಡಗೋಡಿನ ಬಿಸಿಎಂ ಹಾಸ್ಟೇಲ್ ಕಾಮಗಾರಿ ವಿಷಯವಾಗಿಯೂ ಅವರು ಭಾರೀ ಪ್ರಮಾಣದ ನಿರೀಕ್ಷೆಯಲ್ಲಿದ್ದರು. ಆ ಕಟ್ಟಡಕ್ಕೆ ವಿದ್ಯುತ್ ನೀಡಲು ಲಂಚ ಬಯಸಿದ್ದರು. ಹಾಸ್ಟೇಲ್ ಕಟ್ಟಡಕ್ಕೆ ವಿದ್ಯುತ್ ಕಾಮಗಾರಿ ಹಾಗೂ ಇನ್ನಿತರ ಕೆಲಸ ಮಾಡಿಕೊಡಲು ಗುತ್ತಿಗೆದಾರರ ಬಳಿ ಕಾಸು ಕೇಳಿದ್ದರು.
ಕಾಸು ಕೊಡಲು ಇಷ್ಟವಿಲ್ಲದ ಗುತ್ತಿಗೆದಾರ ಶಿವಯೋಗಿ ಕೂಡಲಮಠ ಅವರು ರಹಸ್ಯ ಕಾರ್ಯಾಚರಣೆ ನಡೆಸಿ, ಲೋಕಾಯುಕ್ತರಿಗೆ ದೂರು ನೀಡಿದ್ದರು. ಅದರಂತೆ, ಮಂಗಳವಾರ 65 ಸಾವಿರ ರೂ ಹಣ ಸ್ವೀಕರಿಸುವಾಗ ಲೋಕಾಯುಕ್ತರು ದಾಳಿ ಮಾಡಿದ್ದು, ಆ ಹಣದ ಜೊತೆ ಧರ್ಮರಾಜ ಬೆಡಸಗಾಂವ್ ಅವರನ್ನು ಬಂಧಿಸಿದರು. ಈ ವೇಳೆ ನಡೆದ ಪ್ರಾಥಮಿಕ ತನಿಖೆಯಲ್ಲಿ ಧರ್ಮರಾಜ ಬೆಡಸಗಾಂವ್ ಅವರು ಹಣ ಬೇಡಿದ್ದು ಹಾಗೂ ಹಣ ಸ್ವೀಕರಿಸಿದ್ದು ಸಾಭೀತಾಗಿದ್ದು, ತಕ್ಷಣ ಅವರನ್ನು ವಶಕ್ಕೆಪಡೆದರು.
ಕಾರವಾರ ಲೋಕಾಯುಕ್ತ ಅಧೀಕ್ಷಕ ಕುಮಾರಚಂದ್ರ ನೇತ್ರತ್ವದಲ್ಲಿ ಈ ದಾಳಿ ನಡೆದಿದ್ದು, ಧಾರವಾಡ ಲೋಕಾಯುಕ್ತರು ಕಾರ್ಯಾಚರಣೆಯಲ್ಲಿದ್ದರು. ದಾಳಿ ನಂತರ ವಿವಿಧ ಕಾನೂನು ಪ್ರಕ್ರಿಯೆಗಳು ಮುಂದುವರೆದಿದ್ದು, ಧರ್ಮರಾಜ ಬೆಡಸಗಾಂವ್ ಅವರನ್ನು ಕಾರವಾರದ ಕಾರಾಗೃಹಕ್ಕೆ ಸಾಗಿಸಲಾಗುತ್ತದೆ.