ಮೂರು ವರ್ಷದೊಳಗೆ ಮುಗಿಸಬೇಕಿದ್ದ ಶಿರಸಿಯ ಸಾರ್ವಜನಿಕ ಆಸ್ಪತ್ರೆ ಐದು ವರ್ಷ ಕಳೆದರೂ ಮುಗಿಯದ ಬಗ್ಗೆ ಹೈಕೋರ್ಟ ಅಸಮಧಾನವ್ಯಕ್ತಪಡಿಸಿದೆ. ಆಸ್ಪತ್ರೆ ನಿರ್ಮಾಣ ಕಾಮಗಾರಿಯ ನಿಧಾನಗತಿಯನ್ನು ಪ್ರಶ್ನಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ ನೋಟಿಸ್ ನೀಡಿದೆ.
ರಾಜ್ಯ ಸರ್ಕಾರ 2020-21ನೇ ಸಾಲಿನ ಬಜೆಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿರುವ 100 ಹಾಸಿಗೆಗಳ ಪಂಡಿತ್ ಸಾರ್ವಜನಿಕ ಆಸ್ಪತ್ರೆಯನ್ನು 250 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸುವ ಬಗ್ಗೆ ಘೋಷಿಸಿತ್ತು. ಇದಕ್ಕಾಗಿ 26.8 ಕೋಟಿ ರೂ ವ್ಯಯಿಸುವ ಬಗ್ಗೆ ತಿಳಿಸಿದ್ದು, ಮೂರು ವರ್ಷದಲ್ಲಿ ಈ ಯೊಜನೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿತ್ತು. ನಂತರ ಆಸ್ಪತ್ರೆಯ ನಿರ್ಮಾಣಕ್ಕೆ ಟೆಂಡರ್ ಅಂತಿಮಗೊಳಿಸಲಾಗಿದ್ದರೂ ಐದು ವರ್ಷ ಕಳೆದರೂ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಕಾಮಗಾರಿ ಮುಗಿದಿರಲಿಲ್ಲ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಪ್ರಶ್ನಿಸಿದ್ದರು. ಜೊತೆಗೆ ಆಸ್ಪತ್ರೆ ವಿಷಯದಲ್ಲಿ ಕಾನೂನು ಹೋರಾಟ ಶುರು ಮಾಡಿದ ಅವರು ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ಮೂಲಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಮುಖ್ಯ ನ್ಯಾಯಮೂರ್ತಿ ವಿಭು ಬು ಹಾಗೂ ನ್ಯಾ ಕೆ ಎಸ್ ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರ, ರಾಜ್ಯ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಇಲಾಖೆಯ ಆಡಳಿತ ಇಲಾಖೆಯ ನಿರ್ದೇಶಕರು, ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು, ಮುಖ್ಯ ಎಂಜಿನಿಯರ್, ಉತ್ತರ ಕನ್ನಡ ಜಿಲ್ಲಾಧಿಕಾರಿ, ಜಿಲ್ಲಾ ಸಹಾಯಕ ಆಯುಕ್ತರು ಮತ್ತು ಜಿಲ್ಲಾ ಪಂಚಾಯತ್ ಸಿಇಒಗೆ ನೋಟಿಸ್ ನೀಡಿತು. ನಂತರ ಮುಂದಿನ ವಿಚಾರಣೆಯನ್ನು ಸೆ2ಕ್ಕೆ ಮುಂದೂಡಿತು.
`ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೃದ್ರೋಗ ಹಾಗೂ ನರ ತಜ್ಞರು, ಸರ್ಜನ್‌ಗಳು ಇಲ್ಲ. ಇದರಿಂದ ಶಿರಸಿ, ಸಿದ್ದಾಪುರ, ಮುಂಡಗೋಡ ಮತ್ತು ಹಾನಗಲ್ ಪ್ರದೇಶದಲ್ಲಿ ಹೃದ್ರೋಗ ಹಾಗೂ ನರಗಳ ಸಮಸ್ಯೆ ಅನುಭವಿಸುತ್ತಿರುವ ರೋಗಿಗಳು 125 ಕಿಮೀ ದೂರದ ಹುಬ್ಬಳ್ಳಿಯ ಆಸ್ಪತ್ರೆಗೆ ಹೋಗಬೇಕಿದೆ. ಹೃದಯಘಾತ, ಬ್ರೆನ್ ಹೆಮರೆಜ್ ಕಾಣಿಸಿಕೊಂಡಾಗ ತುರ್ತು ಚಿಕಿತ್ಸಾ ಸೇವೆ ಒದಗಿಸಲು ಹುಬ್ಬಳ್ಳಿಗೆ ಕರೆದೊಯ್ದಿರುವಾಗ ಮಾರ್ಗಮಧ್ಯೆ ಹಲವು ರೋಗಿಗಳು ಸಾವನ್ನಪ್ಪಿದ್ದಾರೆ. ಶೇ 80ರಷ್ಟು ಕಾಮಗಾರಿ ಪೂರ್ಣಗೊಂಡಿದ್ದರು ಸರ್ಕಾರ ಇನ್ನೂ ವೈದ್ಯರು, ನರ್ಸ್, ಸಿಬ್ಬಂದಿಯನ್ನು ಆಸ್ಪತ್ರೆಗೆ ನಿಯೋಜಿಸಿಲ್ಲ ಹಾಗೂ ಜೀವ ರಕ್ಷಕವೈದ್ಯಕೀಯ ಉಪಕರಣಗಳ ಖರೀದಿಸಿಲ್ಲ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
`ಕಾಲಮಿತಿಯೊಳಗೆ ಪಂಡಿತ್ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಪೂರ್ಣಗೊಳಿಸಬೇಕು. ಆಸ್ಪತ್ರೆಗೆ ಹೃದ್ರೋಗ ಹಾಗೂ ನರ ತಜ್ಞರು ಸೇರಿದಂತೆ ವೈದ್ಯರು, ನರ್ಸ್, ಸಿಬ್ಬಂದಿಯನ್ನು ನೇಮಿಸಬೇಕು. ಜೀವ ರಕ್ಷಕ ವೈದ್ಯಕೀಯ ಉಪಕರಣಗಳು, ಸಿ.ಟಿ, ಎಂಆರ್‌ಐ ಸ್ಕ್ಯಾನ್ ಯಂತ್ರಗಳನ್ನು ಆಸ್ಪತ್ರೆಯಲ್ಲಿ ಅಳವಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.