ಶಿರಸಿ ಬನವಾಸಿ ಬಳಿಯ ದಾಸನಕೊಪ್ಪದ ಕಾಳಂಗಿ ವ್ಯವಸಾಯ ಸಹಕಾರಿ ಸಂಘದ ಅವ್ಯವಹಾರ ಪ್ರಶ್ನಿಸಿ ಪ್ರತಿಭಟನೆ ಮಾಡಿದವರಿಗೆ ಇದೀಗ ಸಾಲ ಸಿಗುತ್ತಿಲ್ಲ. ಪ್ರತಿಭಟನೆಯಲ್ಲಿ ಭಾಗಿಯಾದ ಗಣಪತಿ ಸಾಕೇಣ್ಣನವರ್ ಅವರು ಸಾಲ ಕೇಳಿ ಸೊಸೈಟಿಗೆ ಹೋಗಿದ್ದು, ಆಡಳಿತ ಮಂಡಳಿಯವರು ಅವರಿಗೆ ಕೆಟ್ಟದಾಗಿ ಬೈದು ಕಳುಹಿಸಿದ್ದಾರೆ!
ಕಾಳಂಗಿ ವ್ಯವಸಾಯ ಸಹಕಾರಿ ಸಂಘದಿAದ ಕೋಟ್ಯಂತರ ರೂ ಅಕ್ರಮ ನಡೆದ ಬಗ್ಗೆ ಆರೋಪ ಕೇಳಿ ಬಂದಿತ್ತು. ಹಾವೇರಿಯಲ್ಲಿ ಮೀಟರ್ ಬಡ್ಡಿ ವ್ಯವಹಾರ ನಡೆಸುವ ವ್ಯಕ್ತಿಯೊಬ್ಬರಿಗೆ ಸೊಸೈಟಿಯಿಂದ 69 ಲಕ್ಷ ರೂ ಅಕ್ರಮವಾಗಿ ವರ್ಗವಾಗಿರುವ ಬಗ್ಗೆ ಚರ್ಚೆ ನಡೆದಿತ್ತು. ಈ ಬಗ್ಗೆ ತನಿಖೆಗೆ ಆಗ್ರಹಿಸಿ ಸೊಸೈಟಿ ಸದಸ್ಯರು ಪ್ರತಿಭಟಿಸಿದ್ದರು. ಷೇರುದಾರ ರೈತರು ಸಹ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ರೈತರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಸಾಲದ ಹಣ ದುರುಪಯೋಗಪಡಿಸಿಕೊಂಡ ಆರೋಪದ ಬಗ್ಗೆ ತನಿಖೆಗೆ ಒತ್ತಾಯಿಸಿದ್ದರು. ಎರಡು ಹಂತದಲ್ಲಿ ಪ್ರತಿಭಟನೆ ನಡೆದಿದ್ದರೂ ಈ ಬಗ್ಗೆ ಸಮಗ್ರ ತನಿಖೆಯ ಮಾಹಿತಿ ರೈತರಿಗೆ ಸಿಕ್ಕಿರಲಿಲ್ಲ. ಠೇವಣಿ ಇಟ್ಟವರಿಗೂ ಹಣ ಮರಳಿಸದ ಕಾರಣ ಜನ ಆಕ್ರೋಶವ್ಯಕ್ತಪಡಿಸಿದ್ದರು.
ಧರಣಿಯಲ್ಲಿ `ಸಹಕಾರ ನಿಬಂಧಕರು ಸ್ಥಳಕ್ಕೆ ಬರಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದುಮ `ಸೊಸೈಟಿ ಹಣ ನುಂಗಿದ ಭ್ರಷ್ಟರ ಆಸ್ತಿ ಜಪ್ತು ಮಾಡಿ’ ಎಂದು ಒತ್ತಾಯಿಸಿದ್ದರು. ರೈತರು ಅನೇಕರ ವಿರುದ್ಧ ಘೋಷಣೆ ಕೂಗಿ ಸೊಸೈಟಿ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧವೂ ಧಿಕ್ಕಾರ ಕೂಗಿದ್ದರು. ಆ ದಿನ ನಡೆದ ಪ್ರತಿಭಟನೆಯಲ್ಲಿ ಶಿರಸಿ ದಾಸನಕೊಪ್ಪದ ಗಣಪತಿ ದ್ರುವರಾಜ ಸಾಕೇಣ್ಣನವರ್ ಅವರು ಸಹ ಭಾಗವಹಿಸಿದ್ದರು. ಎಲ್ಲರ ಹಾಗೇ ಅವರು ಧರಣಿಯಲ್ಲಿ ಮಾತನಾಡಿದ್ದರು. ಅದಾದ ನಂತರ ಗಣಪತಿ ಸಾಕೇಣ್ಣನವರ್ ಅವರು ಸಾಲ ಕೋರಿ ಸೊಸೈಟಿಗೆ ಹೋಗಿದ್ದು, ಅಲ್ಲಿನ ಆಡಳಿತ ಮಂಡಳಿಯವರು ಸಾಲಕೊಡದೇ ನಿಂದಿಸಿದರು.
ನಟರಾಜ್ ಬಿ ಹೊಸೂರ್, ರಾಜೇಂದ್ರ ಪುಟ್ಟಪ್ಪಗೌಡ್ರು, ದೇವರಾಜ್ ಎಸ್ ನಾಯ್ಕ್, ರಾಜಶೇಖರ್ ಬಂಗಾರಪ್ಪ ಗೌಡ್ರು, ಪ್ರಭು ಮರಿಗೌಡ್ರು, ಕುಮಾರ ಮೂಕಪ್ಪ ಗೌಡ ಸೇರಿ ತಮಗೆ ನಿಂದಿಸಿದ ಬಗ್ಗೆ ಗಣಪತಿ ಸಾಕೇಣ್ಣನವರ್ ಅವರು ದೂರಿದ್ದಾರೆ. `ಧರಣಿ ಮಾಡುತ್ತೀರಿ, ಮತ್ತೆ ಸಾಲ ಕೇಳುತ್ತೀರಿ’ ಎಂದು ಬೈದ ಬಗ್ಗೆ ಅವರು ಅಳಲು ತೋಡಿಕೊಂಡಿದ್ದಾರೆ. ಸಾಲ ಸಿಗದ ಕಾರಣ ಮನೆಗೆ ಮರಳುವಾಗ ದೇವರಾಜ ಭೀಮಪ್ಪ ಹೊಸೂರು ಹಾಗೂ ಬಸವರಾಜ ಭೀಮಪ್ಪ ಹೊಸೂರು ಅಡ್ಡಗಟ್ಟಿ `ನಿಮ್ಮ ಚಳುವಳಿ ಮುಗೀತಾ?’ ಎಂದು ಪ್ರಶ್ನಿಸಿದಲ್ಲದೇ ಜಾತಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ ಬಗ್ಗೆ ಅವರು ಪೊಲೀಸರಲ್ಲಿ ಹೇಳಿದ್ದಾರೆ. ಈ ಬಗ್ಗೆ ಮೇ 31ರಂದೇ ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿ, ಸತ್ಯ ಶೋಧನೆ ಶುರು ಮಾಡಿದ್ದಾರೆ.