ವರ್ಷಕ್ಕೆ ಒಮ್ಮೆ ಮಾತ್ರ ಬಾಗಿಲು ತೆರೆಯುವ ಕಾರವಾರದ ಹಣಕೋಣದ ಸಾತೇರಿ ದೇವಾಲಯದ ಪಕ್ಕದಲ್ಲಿರುವ ಚಣಕಾದೇವಿ ದೇಗುಲಕ್ಕೆ ಕಳ್ಳರು ನುಗ್ಗಿದ್ದಾರೆ. ದೇವಾಲಯದ ದೀಪಗಳನ್ನು ಕಳ್ಳರು ಕದ್ದಿದ್ದಾರೆ.
ಕಾರವಾರದ ಹಣಕೋಣದಲ್ಲಿ ಅನಾಧಿಕಾಲದಿಂದಲೂ ಸಾತೇರಿ ದೇವಿ ನೆಲೆಸಿದ್ದು, ವರ್ಷಕ್ಕೆ ಒಮ್ಮೆ ಇಲ್ಲಿ ಅದ್ಧೂರಿ ಜಾತ್ರೆ ನಡೆಯುತ್ತದೆ. ಜಾತ್ರಾ ಅವಧಿಯ 7 ದಿನಗಳ ಕಾಲ ಮಾತ್ರ ಇಲ್ಲಿ ದೇವಾಲಯದ ಬಾಗಿಲು ತೆರೆಯುತ್ತದೆ. ಸ್ವಯಂ ಚಾಲಿತವಾಗಿ ದೇವಾಲಯದ ಬಾಗಿಲು ತೆರೆಯುತ್ತದೆ ಎಂಬುದು ಭಕ್ತರ ನಂಬಿಕೆ. ಜಾತ್ರೆ ಅವಧಿಯಲ್ಲಿ ಲಕ್ಷಾಂತರ ಭಕ್ತರು ಬರಲಿದ್ದು, ನೆರೆರಾಜ್ಯ-ವಿದೇಶದಲ್ಲಿಯೂ ದೇವಿ ಭಕ್ತರು ನೆಲೆಸಿದ್ದಾರೆ. ಸಾತೇರಿ ದೇಗುಲದ ಪಕ್ಕದಲ್ಲಿ ಚಣಕಾದೇವಿ ದೇಗುಲವಿದ್ದು, ಆ ದೇವಾಲಯಕ್ಕೆ ನುಗ್ಗಿದ ಕಳ್ಳರು 16 ಸಾವಿರ ರೂ ಮೌಲ್ಯದ 4 ಅಡಿ ಎತ್ತರದ ನಂದಾದೀಪಗಳನ್ನು ಕದ್ದಿದ್ದಾರೆ.
ಈ ಬಗ್ಗೆ ದೇವಾಲಯದ ಅಧ್ಯಕ್ಷ ರಾಮದಾಸ್ ಸೈರೋಬಾ ನಾಯ್ಕ ಅವರು ಮಾಹಿತಿ ನೀಡಿದ್ದಾರೆ. ಜೂನ್ 1ರಿಂದ ಜೂನ್ 7ರ ಅವಧಿಯಲ್ಲಿ ಈ ಕಳ್ಳತನ ನಡೆದಿದ್ದು, ಸಮಿತಿಯವರಲ್ಲಿ ಈ ಬಗ್ಗೆ ಚರ್ಚಿಸಿ ಪೊಲೀಸ್ ದೂರು ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ. ಕಳ್ಳರ ವಿರುದ್ಧ ಅವರು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಳ್ಳರನ್ನು ಹುಡುಕಿ ದೇವರ ಆಸ್ತಿ ಮರಳಿಸಿ ಎಂದವರು ಮನವಿ ಮಾಡಿದ್ದಾರೆ.