ಬೆಳಗಾವಿ, ಹುಬ್ಬಳ್ಳಿ ಸೇರಿ ವಿವಿಧ ಕಡೆ ಪೊಲೀಸರಿಗೆ ಯಾಮಾರಿಸಿ ತಪ್ಪಿಸಿಕೊಂಡಿದ್ದ ಮಧು ಐಹೊಳೆ ಎಂಬಾತನನ್ನು ಹಳಿಯಾಳ ಪೊಲೀಸರು ಹಿಡಿದಿದ್ದಾರೆ. ಲಾರಿ ಕದ್ದು ಪರಾರಿಯಾಗಿದ್ದ ಪ್ರಕರಣದಲ್ಲಿ ಕೋರ್ಟಿಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಮಧು ಐಹೊಳೆ ತೆಲಂಗಾಣದಲ್ಲಿ ಸಿಕ್ಕಿಬಿದ್ದಿದ್ದಾರೆ.
ಹಳಿಯಾಳದಲ್ಲಿ 2014ರಲ್ಲಿ ಲಾರಿಯೊಂದು ಕಳ್ಳತನವಾಗಿತ್ತು. ಆ ವೇಳೆ ಸಾಹಸಮೆರೆದ ಪೊಲೀಸರು ಒಟ್ಟು ಆರು ಜನರನ್ನು ಬಂಧಿಸಿದ್ದರು. ಲಾರಿಯನ್ನು ಸಹ ವಶಕ್ಕೆಪಡೆದಿದ್ದರು. ಐದನೇ ಆರೋಪಿಯಾಗಿದ್ದ ಬೆಳಗಾವಿಯ ಮಧು ಯುವರಾಜ್ ಐಹೊಳೆ ನ್ಯಾಯಾಲಯದಿಂದ ಜಾಮೀನುಪಡೆದು ಪರಾರಿಯಾಗಿದ್ದರು. ಈ ಮಧು ಐಹೊಳೆ ವಿರುದ್ಧ ಹಳಿಯಾಳದಲ್ಲಿಯೇ ಎರಡು ಕೇಸುಗಳಿದ್ದವು. ಹುಬ್ಬಳ್ಳಿ, ಬೆಳಗಾವಿ ಪೊಲೀಸ್ ಠಾಣೆಯಲ್ಲಿಯೂ ಮಧು ಐಹೊಳೆ ಆರೋಪಿಯಾಗಿದ್ದರು. 14 ವರ್ಷಗಳಿಂದ ಅವರು ಪೊಲೀಸರಿಗೆ ಸಿಗದೇ ಯಾಮಾರಿಸುತ್ತಿದ್ದರು.
ಉತ್ತರ ಕನ್ನಡ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ತಮ್ಮ ಬುದ್ದಿವಂತಿಕೆ ಪ್ರದರ್ಶಿಸಿ ಮಧು ಐಹೊಳೆ ಹಿಡಿಯುವ ಉಪಾಯ ಮಾಡಿದರು. ತೆಲಂಗಾಣದ ಮೈಲರಾಮಿನಲ್ಲಿ ಅಡಗಿದ್ದ ಆರೋಪಿ ಬಂಧಿಸಲು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ ಕಾರ್ಯತಂತ್ರ ರೂಪಿಸಿದರು. ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಕಂಡಿ, ಪಿಐ ಜಯಪಾಲ ಪಾಟೀಲ ಅವರ ಜೊತೆ ಚರ್ಚಿಸಿ ಪಿಸೈ ಬಸವರಾಜ ಮಬನೂರು, ಪೊಲೀಸ್ ಸಿಬ್ಬಂದಿ ಕೃಷ್ಣ ಅರಕೇರಿ, ವೆಂಕಟೇಶ ತಗ್ಗೀನ, ಬಸವರಾಜ ಹಗರಿ, ಶ್ರೀಶೈಲ ಜಿ ಎಂ, ಲಕ್ಷಣ ಪೂಜಾರಿ, ವಿನೋದ ಜಿ ಬಿ, ರಾಘವೇಂದ್ರ ಅವರ ಜೊತೆ ಸೇರಿ ಆರೋಪಿಯನ್ನು ಬಂಧಿಸಿದರು.