ಮೀಟರ್ ಬಡ್ಡಿ ಜೊತೆ ಕೊಲೆ, ಕೊಲೆ ಯತ್ನ ಸೇರಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮುಂಡಗೋಡಿನ ವ್ಯಕ್ತಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದು, ಅವರನ್ನು ಕಾರವಾರದಿಂದ ಬಳ್ಳಾರಿ ಜೈಲಿಗೆ ಸಾಗಿಸಿದ್ದಾರೆ. ಗಾಂಧೀನಗರದ ಸಂಜು ನವಲೆ ಹಾಗೂ ಗುಂಜಾವತಿಯ ಶಬ್ಬೀರ ಮಸ್ತಮದಾನಿ ಅವರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ.
ಗಾಂಧೀನಗರದ ಸಂಜು ಅರ್ಜುನ ನವಲೆ (24) ಹಾಗೂ ಗುಂಜಾವತಿ ನಿವಾಸಿ ಶಬ್ಬೀರ್ ತಂದೆ ಸತ್ತಾರಸಾಬ ಮಸ್ತಮದಾನಿ (34) ವಿರುದ್ಧ ಹಲವು ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಅವರಿಬ್ಬರ ಮೇಲೆಯೂ ಪೊಲೀಸರು ರೌಡಿ ಶೀಟರ್ ದಾಖಲು ಮಾಡಿದ್ದರು. ಸಂಜು ನವಲೆ ವಿರುದ್ಧ ದರೋಡೆ, ಎರಡು ಕೊಲೆ, ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಹಾಗೂ ಕೊಲೆ ಯತ್ನ ಸೇರಿದಂತೆ ಒಟ್ಟು ಐದು ಪ್ರಕರಣಗಳಿದ್ದವು. 2021ರಿಂದ ರೌಡಿ ಶೀಟರ್ ಪಟ್ಟಿ ಸೇರಿದರೂ ಅಪರಾಧ ಚಟುವಟಿಕೆಗಳನ್ನು ಮುಂದುವರೆಸಿದ ಕಾರಣ ಪೊಲೀಸರು ನಿಗಾವಹಿಸಿದ್ದರು.
ಶಬ್ಬೀರ್ ಮಸ್ತಮದಾನಿ ವಿರುದ್ಧ ಹಲ್ಲೆ, ಕೊಲೆ ಯತ್ನ, ಕೊಲೆ, ದೊಂಬಿ ಹಾಗೂ ಬಲವಂತದ ಹಣ ವಸೂಲಿ ಸೇರಿದಂತೆ ಒಟ್ಟು ಎಂಟು ಪ್ರಕರಣಗಳಿದ್ದವು. 2019ರಲ್ಲಿ ಶಬ್ಬೀರ್ ಮಸ್ತಮದಾನಿ ರೌಡಿ ಪಟ್ಟಿ ಸೇರಿದ್ದು, ಪೊಲೀಸರು ಎಚ್ಚರಿಕೆ ನೀಡಿದರೂ ಕಾನೂನುಬಾಹಿರ ಕೆಲಸಗಳು ಮಾತ್ರ ಕಡಿಮೆ ಆಗಿರಲಿಲ್ಲ. ಹೀಗಾಗಿ ಅವರಿಬ್ಬರ ವಿರುದ್ಧವೂ ಗುಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಮುಂಡಗೋಡ ಪೊಲೀಸ್ ಠಾಣೆಯ ಅಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.
ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಕರ್ನಾಟಕ ಅಪಾಯಕಾರಿ ಚಟುವಟಿಕೆಗಳ ಪ್ರತಿಬಂಧಕ ಅಧಿನಿಯಮದಡಿ ಅವರಿಬ್ಬರನ್ನು ಬಂಧಿಸಿ ಬಳ್ಳಾರಿ ಜೈಲಿಗೆ ಕಳುಹಿಸಲು ಆದೇಶಿಸಿದ್ದಾರೆ. ಅದರಂತೆ ಜೂನ್ 9ರಂದು ಅವರಿಬ್ಬರನ್ನು ಬಂಧಿಸಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.