ಶಿರಸಿಗೆ ಹೊರಟಿದ್ದ ಯಲ್ಲಾಪುರ ನಂದೂಳ್ಳಿಯ ನಾಗಪ್ಪ ಸಿದ್ದಿ ಅವರ ಮೇಲೆ ಅಪರಿಚಿತರು ಆಕ್ರಮಣ ಮಾಡಿದ್ದಾರೆ. ಆ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ನಾಗಪ್ಪ ಸಿದ್ದಿ ಅವರಿಗೆ ಅಲ್ಲಲ್ಲಿ ಪೆಟ್ಟು ಬಿದ್ದಿದ್ದು, ಅವರ ಕತ್ತಿನಲ್ಲಿದ್ದ ಚಿನ್ನದ ಸರ ಹರಿದಿದೆ. ಜೊತೆಗೆ ಹಣ ಹಾಗೂ ವಿವಿಧ ದಾಖಲೆಗಳು ಕಣ್ಮರೆಯಾಗಿದೆ.
ಯಲ್ಲಾಪುರದ ನಂದೂಳ್ಳಿ ಬಳಿಯ ಕುಂಬ್ರಿ ಮಾವಿನಗದ್ದೆಯಲ್ಲಿ ನಾಗಪ್ಪ ಗಿಡ್ಡಾ ಸಿದ್ದಿ ಅವರು ವಾಸವಾಗಿದ್ದಾರೆ. ಸಿವಿಲ್ ಗುತ್ತಿಗೆದಾರರಾಗಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಜೂನ್ 1ರ ರಾತ್ರಿ ಅವರು ಕಾರಿನಲ್ಲಿ ಶಿರಸಿಗೆ ಹೊರಟಿದ್ದು, 9 ಗಂಟೆ ವೇಳೆಗೆ ಶಿರಸಿ ಮಲೆನಳ್ಳಿ ಗ್ರಾಮದ ಬಳಿ ಕಾರು ನಿಲ್ಲಿಸಿದ್ದಾರೆ. ಈ ವೇಳೆ ಅವರಿಗೆ ವಾಂತಿ ಬರುವ ಹಾಗಾಗಿದ್ದು, ಕಾರಿನಿಂದ ಇಳಿದು ಸುಧಾರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಆಗ, ಬೈಕಿನಲ್ಲಿ ಬಂದ ವ್ಯಕ್ತಿಗಳಿಬ್ಬರು ಏಕಾಏಕಿ ನಾಗಪ್ಪ ಸಿದ್ದಿ ಅವರಿಗೆ ನಿಂದಿಸಿದ್ದಾರೆ. ಕಾರಿಗೆ ಪಾಕಿಂಗ್ ಲೈಟ್ ಹಾಕದ ಕಾರಣ ಅವರು ಬೈಗುಳ ಶುರು ಮಾಡಿದ್ದು, ನಾಗಪ್ಪ ಸಿದ್ದಿ ಅವರ ಮೇಲೆ ದಾಳಿ ಮಾಡಿದ್ದಾರೆ. ಅವರ ಏಟಿನಿಂದ ತಪ್ಪಿಸಿಕೊಳ್ಳಲು ನಾಗಪ್ಪ ಸಿದ್ದಿ ಅವರು ಕಾರು ಹತ್ತಲು ಪ್ರಯತ್ನಿಸಿದಾಗ ಬೈಕಿನಲ್ಲಿ ಬಂದವರು ಅಡ್ಡಗಟ್ಟಿ ಹೊಡೆದಿದ್ದಾರೆ. ಅದಾದ ನಂತರ ನಾಗಪ್ಪ ಸಿದ್ದಿ ಅವರ ಕೊರಳಿಗೆ ಕೈ ಹಾಕಿ ಅಲ್ಲಿದ್ದ ಬಂಗಾರದ ಸ್ಪಟಿಕದ ಮಣಿಸರ ಹರಿದಿದ್ದಾರೆ.
ತರಾತುರಿಯಲ್ಲಿ ನಾಗಪ್ಪ ಸಿದ್ದಿ ಅವರು ಅವರಿಂದ ತಪ್ಪಿಸಿಕೊಂಡು ಬಂದಿದ್ದು, ಅದಾದ ನಂತರ ಆ ಗಲಾಟೆಯಲ್ಲಿ ಮಗಳ ಆಧಾರ್, ಶಾಲಾ ದಾಖಲಾತಿ, ಕಿಸೆಯಲ್ಲಿದ್ದ 500ರೂ ಹಣ ಕಾಣೆಯಾಗಿರುವುದು ಗೊತ್ತಾಗಿದೆ. ತಮ್ಮ ಮೇಲೆ ಆಕ್ರಮಣ ನಡೆಸಿದವರ ಬೈಕ್ ನೋಂದಣಿ ನೆನಪು ಮಾಡಿಕೊಂಡ ನಾಗಪ್ಪ ಸಿದ್ದಿ ಅವರು ಅವರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.