`ಜೀವನದಲ್ಲಿ ಕಷ್ಟ ಅನುಭವಿಸಿದವರು ಮಾತ್ರ ಗೆಲುವು ಸಾಧಿಸುತ್ತಾರೆ’ ಎಂದು ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಅವರು ಹೇಳಿದ್ದಾರೆ. `ಪ್ರತಿಯೊಬ್ಬರಿಗೂ ತಮ್ಮದೇ ಆದ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಮುಖ್ಯವಾಗಿದ್ದು, ನಿರಂತರ ಅಧ್ಯಯನದಿಂದ ಉತ್ತಮ ವ್ಯಕ್ತಿತ್ವ ದೊರೆಯುತ್ತದೆ’ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಮುಂಡಗೋಡಿನ ನಾಗನೂರು ಗ್ರಾಮದ ಚಿಪಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಕೋಡ್‌ವೆಸ್ ಸಂಸ್ಥೆಯೂ ತುಮಕೂರಿನ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವಿದ್ಯಾರ್ಥಿಗಳಿಗೆ ಶಿಬಿರ ಆಯೋಜಿಸಿದೆ. ಈ ಶಿಬಿರವನ್ನು ಶಾಂತರಾಮ ಸಿದ್ದಿ ಅವರು ಉದ್ಘಾಟಿಸಿದ್ದಾರೆ. ನಂತರ ಮಾತನಾಡಿದ ಅವರು `ಸ್ಕೋಡ್‌ವೆಸ್ ಸಂಸ್ಥೆಯವರು ಆಯೋಜಿಸಿದ ಈ ಸಮಾಜ ಕಾರ್ಯ ಶಿಬಿರದಿಂದ ಸಮಾಜ ಕಾರ್ಯ ವಿದ್ಯಾರ್ಥಿಗಳು ಬುಡಕಟ್ಟು ಜನಾಂಗದ ಸಂಸ್ಕೃತಿ ಆಚಾರ ವಿಚಾರಗಳ ಅರಿವುಗಳನ್ನು ತಿಳಿಯಲು ಸಾಧ್ಯ’ ಎಂದು ಹೇಳಿದ್ದಾರೆ. `ವ್ಯಕ್ತಿಯ ಜೀವನದಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಬಹು ಮುಖ್ಯವಾದ ಅಂಶವಾಗಿದ್ದು, ಜೀವನದಲ್ಲಿ ಕಷ್ಟವನ್ನು ಅನುಭವಿಸಿದವರು ಗೆಲುವನ್ನು ಸಾಧಿಸುತ್ತಾರೆ’ ಎಂದವರು ಇದೇ ವೇಳೆ ಹೇಳಿದ್ದಾರೆ.
ಸ್ಕೊಡ್‌ವೆಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಅವರು ಮಾತನಾಡಿ `ಸಮಾಜ ಕಾರ್ಯ ಅಧ್ಯಯನವು ಕೇವಲ ಒಂದು ವಿಷಯವಾಗಿ ಮಾತ್ರವಲ್ಲದೇ ಜೀವನದ ವಿಭಿನ್ನ ಹಂತಗಳನ್ನು ಅರಿಯುವ ಒಂದು ಘಟ್ಟವಾಗಿದೆ. ಈ ಸಮಯದಲ್ಲಿ ವೈಯಕ್ತಿಕ ಜೀವನದ ಸವಾಲುಗಳು ಮತ್ತು ಸೋಲುಗಳನ್ನು ಮನವರಿಕೆ ಮಾಡುವ ಹಂತವಾಗಿದೆ’ ಎಂದು ಹೇಳಿದ್ದಾರೆ. ತುಮಕೂರು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಪರಶುರಾಮ್ ಕೆಜಿ ಅವರು ಸಮಾಜ ಕಾರ್ಯ ಶಿಬಿರದ ಮಹತ್ವದ ಬಗ್ಗೆ ಮಾತನಾಡಿದ್ದಾರೆ. ಮುಂಡಗೋಡು ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ ಜಿ ಅವರು ಈ ವೇಳೆ ಮಾತನಾಡಿದ್ದಾರೆ.
ನಾಗನೂರು ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿ ಕೃಷ್ಣ ಮಹಾ ರೆಡ್ಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಭು ಆರ್ ಶಿಗ್ನೆಳ್ಳ, ಶಾಲಾ ಮುಖ್ಯ ಶಿಕ್ಷಕಿ ಗೀತಾ ಶಿವರಾಮ ಭಟ್ಟ, ಸ್ಕೊಡ್‌ವೆಸ್‌ನ ಕೃಷಿ ವಿಭಾಗದ ಕಾರ್ಯಕ್ರಮ ಅಧಿಕಾರಿ ಪ್ರಶಾಂತ ನಾಯಕ, ವಿಶ್ವವಿದ್ಯಾಲಯದ ಶಿಬಿರಾಧಿಕಾರಿ ಟೀನ ಜೋಸ್, ಡೈಸನ್ ಪಿಟಿ, ಸಹ ಶಿಬಿರಾಧಿಕಾರಿ ಶೇಖರಯ್ಯ, ಶ್ರೀನಿವಾಸ್ ಇನ್ನಿತರರು ಈ ಕಾರ್ಯಕ್ರಮದಲ್ಲಿದ್ದರು. ಸಮಾಜ ಕಾರ್ಯ ವಿಭಾಗದ ಸುಮಾರು 100ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದಾರೆ.