ವಿವಿಧ ವಿದ್ಯುತ್ ಕಂಬಗಳ ಮೇಲೆ ಅಪಾಯಕಾರಿ ರೀತಿಯಲ್ಲಿ ಇಂಟರ್‌ನೆಟ್ ಕೇಬಲ್ ಅಳವಡಿಸಲಾಗಿದ್ದು, ಅದನ್ನು ತೆರವು ಮಾಡಬೇಕು ಎಂದು ಆಗ್ರಹಿಸಿ ಅಂಬೇಡ್ಕರ್ ಪರ್ವ ದಲಿತ ಸಂಘರ್ಷ ಸಮಿತಿಯವರು ಯಲ್ಲಾಪುರದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಹೆಸ್ಕಾಂ ಕಚೇರಿ ಎದುರು ಅವರು ಧರಣಿ ನಡೆಸಿದ್ದು, ಅಧಿಕಾರಿಗಳಿಗೆ ವಿವಿಧ ಪ್ರಶ್ನೆಗಳನ್ನು ಕೇಳಿದ್ದಾರೆ.
`ಯಲ್ಲಾಪುರದಲ್ಲಿ ಎಲ್ಲೆಂದರಲ್ಲಿ ಇಂಟರ್‌ನೆಟ್ ಹಾಗೂ ಟಿವಿ ಕೇಬಲ್ ಕಾಣುತ್ತಿದೆ. ವಿದ್ಯುತ್ ಕಂಬಗಳ ಮೇಲೆ ಆ ಕೇಬಲ್ ಎಳೆಯಲಾಗಿದೆ. ನಿಯಮಾನುಸಾರ ಎಜನ್ಸಿಯವರು ಹೆಸ್ಕಾಂ ಶುಲ್ಕ ಪಾವತಿ ಮಾಡಬೇಕಿದ್ದು, ಅದನ್ನು ಮಾಡುತ್ತಿಲ್ಲ. ಅಪಾಯಕಾರಿ ರೀತಿಯಲ್ಲಿ ಕೇಬಲ್ ಅಳವಡಿಕೆ ಆಗಿದ್ದರೂ ಅದನ್ನು ಪ್ರಶ್ನಿಸುವವರಿಲ್ಲ’ ಎಂದು ಧರಣಿನಿರತರು ಆಕ್ಷೇಪಿಸಿದರು.
`ಕಳೆದ ಮೂರು ವರ್ಷಗಳಿಂದ ಈ ಬಗ್ಗೆ ಧ್ವನಿ ಎತ್ತಿದರೂ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬೇಕಾಬಿಟ್ಟಿ ಕೇಬಲ್ ಅಳವಡಿಕೆಯಿಂದ ಹೆಸ್ಕಾಂ ಆದಾಯಕ್ಕೂ ನಷ್ಟವಾಗಿದೆ. ನಿಯಮಾನುಸಾರ ಕೇಬಲ್ ಎಜನ್ಸಿಯವರಿಂದ ಶುಲ್ಕಪಡೆಯಬೇಕು’ ಎಂದು ಆಗ್ರಹಿಸಿದರು. ಅಂಬೇಡ್ಕರ್ ಪರ್ವ ದಲಿತ ಸಂಘರ್ಷ ಸಮಿತಿಯ ವಿನಾಯಕ ಬೋವಿವಡ್ಡರ್, ತಾರಾನಾಥ ನಾಯ್ಕ, ಸಂಶುದ್ಧಿನ್ ಮಾರ್ಕರ್, ಯೋಗೇಶ ನಾಯ್ಕ ಧರಣಿ ನಡೆಸಿದರು.